ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧಪಟ್ಟಂತೆ ದೂರು ದಾಖಲಿಸಿಕೊಂಡಿದ್ದ ಮೈಸೂರು ಲೋಕಾಯುಕ್ತ ಪೊಲೀಸರು ಇಂದಿನಿಂದ ತನಿಖೆ ಆರಂಭಿಸಿದ್ದಾರೆ.ಇಂದು ಬೆಳಿಗ್ಗೆ ಮುಡಾ ನಿವೇಶನ ಪಡೆದಿರುವ ಸ್ಥಳವಾದ ಕೆಸರೆ ಗ್ರಾಮದ ಸರ್ವೆನಂ 464ರ 3 ಎಕರೆ 14 ಗುಂಟೆ ಸ್ಥಳವನ್ನು ಮಹಜರು ಮಾಡಲಾಗುತ್ತಿದೆ.
ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರ ಬಗ್ಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸ್ಥಳ ಪರಿಶೀಲನೆ ಸಮಯದಲ್ಲಿ ಕರೆತಂದು ಅವರ ಸಮ್ಮುಖದಲ್ಲಿ ಮಹಜರು ಮಾಡಲಾಗಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ ವರ್ಗಾವಣೆಯಾದ ಸೈಟ್ ವ್ಯವಹಾರದಲ್ಲಿ ಅಕ್ರಮವಾಗಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ತನಿಖೆಗೆ ನಾನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಸಹಕಾರ ನೀಡುತ್ತೇನೆ. ತನಿಖೆಯಲ್ಲಿ ಯಾವುದೇ ರೀತಿಯ ದಾಖಲೆಗಳು ಬೇಕಿದ್ದರೆ ನನ್ನ ಬಳಿ ಇರುವ ದಾಖಲೆಗಳನ್ನು ನೀಡಲು ಸಿದ್ಧನಿದ್ದೇನೆ. ತನಿಖೆ ವೇಳೆ ಏನು ಕೇಳಿದರೂ ಕೊಡುತ್ತೇನೆ. ನಾನು ಪುರಾವೆ ಇಲ್ಲದೆ ಸುಳ್ಳು ಆರೋಪ ಮಾಡುವುದಿಲ್ಲ. ಈ ಪ್ರಕರಣದಲ್ಲೂ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.