ಪರಮಪದ ಸಾಂಸ್ಕೃತಿಕ ಸಂಸ್ಥೆ ಕಳೆದ 17 ತಿಂಗಳುಗಳಿಂದ ಕುವೆಂಪು, ಬೇಂದ್ರೆ, ಜಯಂತ ಕಾಯ್ಕಿಣಿ, ಮುಖೇಶ್, ಕಿಶೋರ್ ಕುಮಾರ್, ಎಚ್ಎಸ್ ವೆಂಕಟೇಶಮೂರ್ತಿ ಬಿ ಆರ್ ಲಕ್ಷ್ಮಣ್ ರಾವ್ ಮುಂತಾದ ಅನೇಕ ಗಣ್ಯರ ಕವಿತೆಗಳನ್ನು ಸಾದರಪಡಿಸುತ್ತಿದೆ.
ಈ ಬಾರಿ ಬೆಂಗಳೂರಿನಲ್ಲಿ ನಡೆದ ಸ್ನೇಹದ ಕಡಲಲ್ಲಿ ಕಾರ್ಯಕ್ರಮ ಉದ್ಯಾನ ನಗರಿಯನ್ನು ಆವರಿಸಿತು. ಖ್ಯಾತ ಕಲಾವಿದ ಪ್ರಣಯರಾಜ ಡಾ. ಶ್ರೀನಾಥ್ ಅವರ ಚಲನಚಿತ್ರದಿಂದ ಆಯ್ದ ಗೀತೆಗಳನ್ನು ರಾಮಚಂದ್ರ ಹಡಪದ್, ಸ್ಪರ್ಶ ಹಾಗೂ ಹರ್ಷ ರಂಜಿನಿ ಸಾದರ ಪಡಿಸಿದರು.ಸಂಸ್ಥೆಯ ರೂವಾರಿ ಅಪ್ರತಿಮ ಗಾಯಕ ರಾಮಚಂದ್ರ ಹಡಪದ್ ಗಾಯನದಲ್ಲಿ ಮಿಂಚಿದರು.
ಹಿನ್ನೆಲೆ ಗಾಯಕಿಯರಾದ ಹರ್ಷ ರಂಜಿನಿ ಹಾಗೂ ಸ್ಪರ್ಶ ಇಳಿದನಿ ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿತ್ತು.ಕೇವಲ ಗಾಯನಕ್ಕೆ ಮಾತ್ರ ಸೀಮಿತವಾಗದ ಕಾರ್ಯಕ್ರಮ ರಾಘವೇಂದ್ರ ಕಾಂಚನ್ ಅವರ ನಿರೂಪಣೆಯಲ್ಲಿ ಶ್ರೀನಾಥ್ ಅವರನ್ನು ಸತತ ಮೂರು ಗಂಟೆಗಳ ಕಾಲ ವೇದಿಕೆಯಲ್ಲಿ ಕುಳ್ಳಿರಿಸಿ ಅವರಿಂದ ಅನುಭವಗಳನ್ನು ದಾಖಲಿಸಿತು.
ಪ್ರತಿ ಹಂತದಲ್ಲಿ ಪುಟ್ಟಣ್ಣ ಕಣಗಾಲರ ಹೆಸರನ್ನು ಉಲ್ಲೇಖಿಸುತ್ತಾ ಗುರು ಭಕ್ತಿ ಮೆರೆದ ಡಾ. ಶ್ರೀನಾಥ್ ಶುಭ ಮಂಗಳ ಚಿತ್ರಕ್ಕೆ ಆಯ್ಕೆಯಾಗಲು ಕಾರಣಿಭೂತರಾದ ನಿರ್ದೇಶಕ, ಕಲಾವಿದ ಕೆ ಎಸ್ ಎಲ್ ಸ್ವಾಮಿ ಅವರನ್ನು ನೆನೆದು ಭಾವುಕರಾದರು. 1974 ರಲ್ಲಿ 50 ವರ್ಷಗಳ ಹಿಂದೆ ಬಿಡುಗಡೆಯಾದ ಶುಭಮಂಗಳ, ಮಾನಸ ಸರೋವರ, ಚಿತ್ರದ ಹಾಡುಗಳು ಕೇಳುಗರ ಮನಸೆಳೆದವು.