ಸತೀಶ್ ಕುಮಾರ್ ಎಸ್ ನಿರ್ದೇಶನದ ಈ ಚಿತ್ರಕ್ಕೆ ನಿಹಾಲ್ ರಾಜ್ ನಾಯಕಪ್ಯಾಂಥರ್ಸ್ ಕ್ರಿಯೇಟಿವ್ ಸಿನಿಮಾಸ್ ಲಾಂಛನದಲ್ಲಿ ರಂಜನ ಎಂ ಕುಮಾವತ್ ನಿರ್ಮಿಸುತ್ತಿರುವ ಹಾಗೂ ಸತೀಶ್ ಕುಮಾರ್ ಎಸ್ ಚೊಚ್ಚಲ ನಿರ್ದೇಶನದ “ಮದ್ದಾನೆ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕರಾದ ಕೆ.ಮಂಜು , ರಮೇಶ್ ಯಾದವ್ ಹಾಗೂ ಕಡ್ಡಿಪುಡಿ ಚಂದ್ರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿಹಾಲ್ ರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.
ಮುಹೂರ್ತ ಸಮಾರಂಭದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ “ಮದ್ದಾನೆ” ಚಿತ್ರದ ಬಗ್ಗೆ ಚಿತ್ರತಂಡದವರು ಮಾತನಾಡಿದರು.”ಮದ್ದಾನೆ” ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಸತೀಶ್ ಕುಮಾರ್, ಇದೊಂದು ಹಳ್ಳಿ ಹಾಗೂ ಕಾಡಿನ ನಡುವೆ ನಡೆಯುವ ಕಥೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿಕ್ಕಮಗಳೂರಿನಲ್ಲೇ ನಡೆಯುತ್ತದೆ. ನಿಹಾಲ್ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ನನ್ನ ಶ್ರೀಮತಿ ರಂಜನ ಎಂ ಕುಮಾವತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ವಿನೋದ್ ಭಾರತಿ ಛಾಯಾಗ್ರಹಣ, ಸ್ವಾಮಿನಾಥನ್ ಸಂಗೀತ ನಿರ್ದೇಶನ, ಪುನೀತ್ ಆರ್ಯ ಸಾಹಿತ್ಯ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅರವಿಂದ್ ರಾವ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಮೂಲತಃ ಮಾರ್ಷಲ್ ಆರ್ಟ್ಸ್ ಕಲಾವಿದನಾಗಿರುವ ನಾನು, ಈವರೆಗೂ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದೇನೆ.
ಬೆಂಗಳೂರಿನ ಕೆಲವು ಕಡೆ ಮಾರ್ಷಲ್ ಆರ್ಟ್ಸ್ ತರಭೇತಿ ಶಾಲೆಗಳನ್ನು ನಡೆಸುತ್ತಿದ್ದೇನೆ. ಮೂವತ್ತು ವರ್ಷಗಳಿಂದ ಕನ್ನಡ ಚಿತ್ರಗಳನ್ನೇ ನೋಡಿಕೊಂಡು ಬರುತ್ತಿರುವ ಪ್ರೇಕ್ಷಕ ನಾನು. ಸಿನಿಮಾ ನಿರ್ದೇಶನ ನನ್ನ ಕನಸು. ನಿರ್ದೇಶನದ ಬಗ್ಗೆಯೂ ಓದಿಕೊಂಡು ಬಂದು ಈಗ ಮೊದಲ ನಿರ್ದೇಶನದ ಚಿತ್ರ ಆರಂಭಿಸಿದ್ದೇನೆ ಎಂದರು.
ನಾನು ಮೂಲತಃ ರಂಗಭೂಮಿ ಕಲಾವಿದ. “ರಾಣಾ” ಹಾಗೂ “ವಿಷ್ಣುಪ್ರಿಯ” ಚಿತ್ರಗಳಲ್ಲಿ ನಟಿಸಿದ್ದೇನೆ. ಕೆ.ಮಂಜು ಅವರ ಸಹಕಾರ ಮೊದಲಿನಿಂದಲೂ ಇದೆ. ಇಂದು ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೂ ಬಂದು ಅವರು ಹಾರೈಸಿದ್ದು ಸಂತೋಷವಾಗಿದೆ. ಅವರಿಗೆ ಹಾಗೂ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ನಿಹಾಲ್ ರಾಜ್.
ಮೊದಲ ನಿರ್ಮಾಣದ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ರಂಜನ ಎಂ ಕುಮಾವತ್. ಸಂಗೀತ ನಿರ್ದೇಶಕ ಸ್ವಾಮಿನಾಥನ್, ಛಾಯಾಗ್ರಾಹಕ ವಿನೋದ್ ಭಾರತಿ, ಗೀತರಚನೆಕಾರ ಪುನೀತ್ ಆರ್ಯ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ನಟ ಅರವಿಂದ್ ರಾವ್ ತಮ್ಮ ಕಾರ್ಯಗಳ ಕುರಿತು ಮಾಹಿತಿ ನೀಡಿದರು.