ರಾಮನಗರ: ಪ್ರತಿ ವರ್ಷದಂತೆ ಈ ವರ್ಷವೂ ಸಹ 78ನೇ ಸ್ವಾತಂತ್ರ್ಯೋತ್ಸವದ ದಿನದಂದು ರಾಮನಗರ ಕ್ಷೇತ್ರದ ಶಾಸಕ ಹೆಚ್.ಎ.ಇಕ್ಬಾಲ್ಹುಸೇನ್ ಅವರ ಸ್ವಂತ ಖರ್ಚಿನಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ ಗಳು, ಶಾಲಾ-ಕಾಲೇಜುಗಳ ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ (ಲಾಡು) ವಿತರಣೆ ಮಾಡಲು ಭರದಿಂದ ಸಿದ್ದತೆಗಳು ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ರಾಯರದೊಡ್ಡಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ 100ಕ್ಕೂ ಹೆಚ್ಚು ನುರಿತ ಬಾಣಸಿಗರು ಲಾಡುಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲ್ಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ / ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಡಿಇಡಿ, ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಆಯಾಯ ವಿಭಾಗಗಳ ಮುಖ್ಯಸ್ಥರ ಮೂಲಕ ಸಿಹಿ ತುಂಬಿದ ಬಾಕ್ಸ್ಗಳನ್ನು ವಿತರಿಸಲು ಎಲ್ಲ ಸಿದ್ದತೆ ನಡೆಯುತ್ತಿದೆ.
ಪ್ರಾಥಮಿಕ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬಿಇಓಗಳು ಕ್ಲಸ್ಟರ್ ಹಂತದಲ್ಲಿ ಸುಗಮವಾಗಿ ಸಿಹಿ ವಿತರಣೆ ಮಾಡಲು ಮಕ್ಕಳ ಪಟ್ಟಿ ಸಿದ್ದತೆ ಮಾಡಿ ಕೊಂಡಿದ್ದು, ಆ.14ರ ಬುಧವಾರ ಬೆಳಿಗ್ಗೆ ರಾಮನಗರದಿಂದ ಎಲ್ಲ ತಾಲ್ಲೂಕುಗಳಿಗೆ ಸಿಹಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.ನೋಡೆಲ್ ಅಧಿಕಾರಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಯಾಯ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಓಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಹಿ ತುಂಬಿದ ಬಾಕ್ಸ್ಗಳನ್ನು ಪಡೆದು ಸಮರ್ಪಕ ವಿತರಣೆಗೆ ಕ್ರಮ ವಹಿಸಲಿದ್ದಾರೆ. ಅವರ ಸಹಕಾರದಿಂದಲೇ ಪ್ರತಿವರ್ಷ ಸಿಹಿ ವಿತರಣೆ ಕಾರ್ಯಕ್ರಮ ಯಶ ಸ್ಸು ಕಾಣುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.