ದೇವನಹಳ್ಳಿ: ತಾಲೂಕಿನ ಆಡಳಿತ ಸೌಧದ ಆವರಣದ ಸ್ವಚ್ಛತೆ ಮಾಡಿಸಲಿದ್ದೇನೆ, ಆವರಣದ ಮೈದಾನದಲ್ಲಿ ಶುಚಿಗೊಳಿಸಿ ಹಲವಾರು ಗಿಡಮರಗಳನ್ನು ನೆಡಲಾಗುವುದು ಮತ್ತು ಸಾರ್ವಜನಿಕರಿಗಾಗಿ ಶೌಚಾಲಯವನ್ನು ನಿರ್ಮಿಸುವುದರ ಮೂಲಕ ಸ್ವಚ್ಛತೆಗೆ ನನ್ನ ಮೊದಲ ಆದ್ಯತೆ ಎಂದು ನೂತನ ತಹಸೀಲ್ದಾರ್ ಎಚ್.ಬಾಲಕೃಷ್ಣ ಹೇಳಿದರು.
ದೇವನಹಳ್ಳಿ ತಾಲೂಕಿನ ಆಡಳಿತ ಸೌಧದಲ್ಲಿ ನೂತನ ತಹಸಿಲ್ದಾರ್ ಆಗಿ ಅಧಿಕಾರ ಸ್ವೀಕರಿಸಿ ಸಹಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇವನಹಳ್ಳಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವ ಸಹ ನನಗಿದೆ ಸಾಕಷ್ಟು ಜನಪರ, ರೈತಪರ ಕೆಲಸ ನಿರ್ವಹಿಸುವ ಹುಮ್ಮಸ್ಸಿನಿಂದ ಹಲವಾರು ಜನಪರ ಸೇವೆಯನ್ನು ಮಾಡುವ ಆಶಯ ನನ್ನಲ್ಲಿದೆ ಹಾಗೂತಾಲೂಕಿನ ಬಗೆಹರಿಯದ ಸಮಸ್ಯೆಗಳಾದ ಸ್ಮಶಾನ, ರಸ್ತೆ ಸಂಪರ್ಕಗಳು, ಸರ್ಕಾರಿ ಶಾಲಾ ಕಟ್ಟಡಗಳ ದುರಸ್ಥಿ, ಭೂ ಒತ್ತುವರಿ ವಿವಾದಗಳು ಸೇರಿದಂತೆ ಹಲವಾರು ಸಾರ್ವಜನಿಕ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸಿ ಹಂತ-ಹಂತವಾಗಿ ಬಗೆಹರಿಸಲಾಗುವುದು ಎಂದರು.
ಈ ವೇಳೆಯಲ್ಲಿ ಹಲವಾರು ಸಮಾಜದ ಮುಖಂಡರುಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಆಡಳಿತ ಸೌಧದ ಸಿಬ್ಬಂದಿ ವರ್ಗದವರು ನೂತನವಾಗಿ ಅಧಿಕಾರ ಸ್ವೀಕರಿಸಿದ ತಹಶೀಲ್ದಾರ್ ರವರಿಗೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಆರ್ಎಚ್ಐ ಗಂಗಾಧರ್, ತಹಸಿಲ್ದಾರ್ ರಾಜೀವ್ ಸುಲೋಚನ, ನಿವೃತ್ತ ತಹಸೀಲ್ದಾರ್ ವಿಜಯ್ ಕುಮಾರ್, ಆರ್.ಐ.ಮಹೇಶ್, ಶಿರಸ್ತೆದಾರ್ಭರತ್, ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಎಂ ರವಿಕುಮಾರ್ ಮತ್ತು ಮುಖಂಡರು, ಸಂತೋಷ್, ಮಹೇಶ್, ಸಮಾಜಸೇವಕ ಭುವನಹಳ್ಳಿ ತಿಪ್ಪಣ್ಣ, ಸೋಲೂರು ನಾಗಾರಾಜ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಆಡಳಿತ ಸೌಧದ ಸಿಬ್ಬಂದಿಯ ವರ್ಗದವರು ಇದ್ದರು.