ಬೆಂಗಳೂರು: 1991 ನೇ ಇಸವಿಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸ್ಥಾಪನೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕೂಡಲೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇದುವರೆಗೂ ಬಂದಂತಹ ಮೂರು ಪಕ್ಷಗಳ ಸರ್ಕಾರಗಳು ಯಾವುದೇ ರೀತಿಯ ಸೂಕ್ತ ಅನುದಾನಗಳನ್ನು ಬಿಡುಗಡೆ ಮಾಡದೆ, ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸಂಶೋಧನಾರ್ತಿಗಳಿಗೆ ,ಬೋಧಕ ಸಿಬ್ಬಂದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕನ್ನಡ ಭಾಷೆಯನ್ನು ಆಳುವ ಸರ್ಕಾರಗಳು ತಿರಸ್ಕಾರ ಭಾವನೆಯಿಂದ ನೋಡಿದರೆ ಕನ್ನಡಿಗರು ನಿಜಕ್ಕೂ ಕ್ಷಮಿಸರು.
ಅಲ್ಲಿನ ಉಪ ಕುಲಪತಿಗಳು ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರ, ಬೋಧನಾ ಕಟ್ಟಡ ,ರಸ್ತೆಗಳು, ವಿದ್ಯಾರ್ಥಿ ವಸತಿ ಗೃಹಗಳು, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗಾಗಿ ಈಗಾಗಲೇ 2023ರ ಡಿಸೆಂಬರ್ 20ನೇ ತಾರೀಖಿನಂದು 150 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಸೂಕ್ತ ಅನುದಾನಗಳ ಬಿಡುಗಡೆಯಾಗದೆ ಇರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಕೂಡಲೇ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ತಮ್ಮ ಕಾಲಾವಧಿಯಲ್ಲಿ ಉಳಿಸುವಂತಹ ಮಹತ್ತರ ಕಾರ್ಯ ಆಗಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಆಗ್ರಪಡಿಸಿದ್ದಾರೆ.