ಬಂಗಾರಪೇಟೆ: ಗ್ರಾಮೀಣ ಭಾಗದ ಜನರ ಪಾರದರ್ಶಕ ಹಣಕಾಸಿನ ವ್ಯವಹಾರ ನಿರ್ವಹಣೆಗೆ ಕಾರ್ಯನಿರ್ವಹಿಸಲು ಕೆನರಾ ಬ್ಯಾಂಕ್ ಬದ್ಧವಾಗಿದೆ ಎಂದು ಜಿಲ್ಲಾ ವಲಯ ಮುಖ್ಯ ಅಧಿಕಾರಿ ಅಶೋಕ್ ಕುಮಾರ್, ಎಂ ತಿಳಿಸಿದರು.ತಾಲೂಕಿನ ಐನೋರಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೆನರಾ ಬ್ಯಾಂಕಿನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, 1906ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿತವಾದ ಕೆನರಾ ಬ್ಯಾಂಕ್ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿತ್ತು ಆದರೆ ಗ್ರಾಹಕರ ಬೆಂಬಲ, ಸಿಬ್ಭಂಗಳ ಅವಿರತ ಪರಿಶ್ರಮ ಹಾಗೂ ಪಾರದರ್ಶಕ ಆಡಳಿತ ನಿರ್ವಹಣೆಯಿಂದಾಗಿ ಇಂದು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ದೇಶ ವ್ಯಾಪಿ ತನ್ನದೇ ಆದ ಶಾಖೆಗಳನ್ನು ಒಳಗೊಂಡಿದೆ ಎಂದರು.
ಲೀಡ್ ಬ್ಯಾಂಕ್ ರೂಪದಲ್ಲಿ ಯಶಸ್ಸಿನ ಹಾದಿಯತ್ತ ಕಾರ್ಯನಿರ್ವಹಣೆ: ಕೆನರಾ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಬರುವಂತಹ ಇತರ ಎಲ್ಲಾ ಬ್ಯಾಂಕುಗಳ ಹಣಕಾಸು ನಿರ್ವಹಣೆ, ಮತ್ತು ರೈತರ ಸಾಲ, ವಾಣಿಜ್ಯೋದ್ಯಮ, ಗೃಹ ನಿರ್ಮಾಣ, ಚಿನ್ನದ ಸಾಲ , ಮತ್ತು ಉಳಿತಾಯ ಖಾತೆಗಳನ್ನು ಒಳಗೊಂಡಂತೆ ಇನ್ನಿತರ ಎಲ್ಲಾ ಸೇವೆಗಳ ಮೇಲ್ವಿಚಾರಣೆಯನ್ನು ಲೀಡ್ ಬ್ಯಾಂಕ್ ರೂಪದಲ್ಲಿ ಕಾರ್ಯನಿರ್ವಹಿಸುವುದು ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ, ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಎಲ್ಲಾ ಗ್ರಾಹಕರ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಖಾಸಗಿ ಹಣಕಾಸು ಸಂಸ್ಥೆಗಳ ಉಪಟಲಕ್ಕೆ ಅಂತ್ಯ: ಗ್ರಾಹಕರಾದ ಪುಷ್ಪಲತಾ ರವರು ಮಾತನಾಡಿ, ಗ್ರಾಮೀಣ ಭಾಗದ ಜನರು ಸಾಲ ಸೌಲಭ್ಯಗಳಿಗಾಗಿ ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗಿ ಹೆಚ್ಚು ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದರು ಇದರೊಟ್ಟಿಗೆ ಮಧ್ಯವರ್ತಿಗಳ ಉಪಟಳ ಹೆಚ್ಚಾಗುತ್ತಿತ್ತು, ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ 2013 ನಮ್ಮ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆ ಸ್ಥಾಪನೆಯಾಯಿತು ಇದರಿಂದ ಜನರು ಸಂಕಷ್ಟದಿಂದ ಪಾರಾಗಿದ್ದಾರೆ, ಮತ್ತು 1906ರಲ್ಲಿ ಹಿಂದೂ ಶಾಶ್ವತ ನಿಧಿಯಾಗಿ ರೂಪಿತವಾದ ಕೆನರಾ ಬ್ಯಾಂಕ್ ಇಂದು 12 ಕೋಟಿ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವುದು ಹೆಮ್ಮೆಯ ವಿಚಾರ ಮತ್ತು 2023-24ರಲ್ಲಿ ಪ್ರಧಾನ ಮಂತ್ರಿ ಸ್ವಾನಿಧಿ ಪ್ರಶಸ್ತಿ ಪಡೆದಿರುವುದು ಪ್ರಶಂಸನಾರ್ಹ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ರೀಜಿನಲ್ ಆಫೀಸರ್ ಅಶೋಕ್ ಕುಮಾರ್, ಬ್ಯಾಂಕ್ ವ್ಯವಸ್ಥಾಪಕರಾದ ಅತುಲ್ ಕುಮಾರ್, ಸುಜಿತ್ ಹಲ್ದಾರ್, ಅಯ್ಯುಬ್, ಅಮಿತ್ ಕುಮಾರ್ ಗುಪ್ತ, ಇತರರು ಉಪಸ್ಥಿತರಿದ್ದರು.