ಹೈದರಾಬಾದ್: 2023ರ ಫೆಬ್ರುವರಿಯಲ್ಲಿ ಹೈದರಾಬಾದ್ನಲ್ಲಿ ನಡೆದ ಫಾರ್ಮುಲಾ-ಇ-ರೇಸ್ನಲ್ಲಿನ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕ ಕೆಟಿ ರಾಮರಾವ್ ಮತ್ತು ಇತರ ಕೆಲವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮುಂದಿನ ತಿಂಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ತೆಲಂಗಾಣ ಪೊಲೀಸ್ ಭ್ರಷ್ಟಾಚಾರ ನಿರ್ಗಹ ದಳ (ಎಸಿಬಿ) ದೂರನ್ನು ಗಮನದಲ್ಲಿಟ್ಟುಕೊಂಡು ತನಿಖಾ ಸಂಸ್ಥೆಯು ಕಳೆದ ವಾರ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇಸಿಐಆರ್ ಅಥವಾ ಎಫ್ಐಆರ್ ದಾಖಲಿಸಿದೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ರಾಮರಾವ್ ಜನವರಿ 7 ರಂದು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ತನಿಖಾ ಸಂಸ್ಥೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ನಿವೃತ್ತ ಅಧಿಕಾರಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಎಚ್ಎಂಡಿಎ) ಮಾಜಿ ಮುಖ್ಯ ಎಂಜಿನಿಯರ್ ಬಿಎಲ್ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜನವರಿ 2 ಮತ್ತು ಜನವರಿ 3 ರಂದು ಸಮನ್ಸ್ ನೀಡಲಾಗಿದೆ.
ಕೆಟಿಆರ್ ಎಂದು ಜನಪ್ರಿಯರಾಗಿರುವ 48 ವರ್ಷದ ರಾಮರಾವ್ ವಿರುದ್ಧದ ತನಿಖೆಯು ಫೆಬ್ರುವರಿಯಲ್ಲಿ ಹಿಂದಿನ ಬಿಆರ್ಎಸ್ ಆಡಳಿತದಲ್ಲಿ ಹೈದರಾಬಾದ್ನಲ್ಲಿ ಫಾರ್ಮುಲಾ-ಇ ರೇಸ್ ಸಂಘಟಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸೂಕ್ತ ನಿಯಮಗಳನ್ನು ಪಾಲಿಸದೆಯೇ ಕಂಪನಿಗೆ 55 ಕೋಟಿ ರೂ.ಗಳನ್ನು ವರ್ಗಾಯಿಸಲು ಅನುಮತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.
ಮೂಲಗಳ ಪ್ರಕಾರ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲಿ ಸಂಭವನೀಯ ವಿದೇಶಿ ವಿನಿಮಯ ನೀತಿ ಉಲ್ಲಂಘನೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? ನಾವು 55 ಕೋಟಿ ರೂ. ಪಾವತಿಸಿದ್ದೇವೆ. ಅವರು (ಫಾರ್ಮುಲಾ-ಇ) ಪಾವತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ರಾಮರಾವ್ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.