ಹತ್ರಾಸ್ : ಸಂಭಾಲ್ ವಿವಾದದ ನಡುವೆ 2020ರ ಸೆಪ್ಟೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ದಲಿತ ಯುವತಿ ಕುಟುಂಬವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಭೇಟಿಯಾದರು.
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಹತ್ರಾಸ್ ನ ಚಂದ್ಪಾ ಪ್ರದೇಶದ ಬೂಲ್ ಗರ್ಹಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
2020ರ ಅಕ್ಟೋಬರ್ 3 ರಂದು ಹಾಥರಸ್ ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ಯುವತಿ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುವುದಾಗಿ ಘೋಷಿಸಿದ್ದರು.
ರಾಹುಲ್ ಭೇಟಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಕೇವಲ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುತ್ತಾರೆಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ ಎಂದಿದ್ದಾರೆ.
ದೇಶದ ನೊಂದ ಜನರೊಂದಿಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸದಾ ಇರುತ್ತಾರೆ. ಗ್ಯಾಂಗ್ ರೇಪ್ ಗೆ ಒಳಗಾದ ಕುಟುಂಬದೊಂದಿಗೂ ಅವರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಚಂದ್ರಗುಪ್ತ ವಿಕ್ರಮಾದಿತ್ಯಾ ಹೇಳಿದ್ದಾರೆ.