ಬೆಂಗಳೂರು: ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಪ್ರಸ್ತುತ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಹಾಯಧನವನ್ನು ಹೆಚ್ಚಿಸುವ ಬದಲು ಶೇ. 75ರಿಂದ ಶೇ. 55ಕ್ಕೆ ಇಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಪತ್ರ ಬರೆದಿರುವ ಅವರು, 2023-24ನೇ ಸಾಲಿನಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೈತರಿಗೆ ಶೇ. 75ರಷ್ಟು ಸಹಾಯಧನ ದೊರಕಿತ್ತು.
ಆದರೆ ಪ್ರಸಕ್ತ ಸಾಲಿನಲ್ಲಿ ಶೇ. 55ರಷ್ಟು ಮಾತ್ರ ಸಹಾಯಧನ ನೀಡುವುದಾಗಿ ಇಲಾಖೆಗಳು ಸುತ್ತೋಲೆ ಹೊರಡಿಸಿವೆ. ಇದರಿಂದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.ರೈತರಿಗೆ ಮೋಸ ಮಾಡುವ ಈ ಆದೇಶವನ್ನು ತಕ್ಷಣವೇ ಹಿಂಪಡೆದು, ರೈತರಿಗೆ ಸೇರಬೇಕಾದ ಶೇ. 90ರಷ್ಟು ಸಹಾಯಧನವನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳೊಂದಿಗೆ ಸೇರಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪತ್ರದ ಮೂಲಕ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದ್ದಾರೆ.