ಬೆಂಗಳೂರಿನ ಹನುಮಗಿರಿ ಕ್ಷೇತ್ರಕ್ಕೆ ಇತಿಹಾಸ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪ್ರದೇಶವನ್ನು ಮಾಂಡವ್ಯ ಋಷಿಗಳ ಕ್ಷೇತ್ರವೆನ್ನಲಾಗುತ್ತದೆ. ಮತ್ತು ಕತೆಗಳ ಪ್ರಕಾರ ಹನುಮಂತನು ಸಂಜೀವಿನಿ ಪರ್ವತ ಹೊತ್ತೊಯ್ಯುವಾಗ ಬಿದ್ದಿರುವ ಚೂರು ಎಂದು ಕೂಡ ಹೇಳುತ್ತಾರೆ. ಈ ಪ್ರದೇಶದಲ್ಲಿ ಹನುಮನ, ಅರ್ಕೇಶ್ವರ ಸ್ವಾಮಿಯ ಸನ್ನಿಧಿ ಬಹಳ ವಿಶೇಷ ಮತ್ತು ಸತ್ವವುಳ್ಳ ಪ್ರದೇಶವಾಗಿದ್ದು ಶತಮಾನಗಳಿಂದ ಇಲ್ಲಿಯ ಸ್ಥಳೀಯರು ಮತ್ತು ಮಹಿಮೆಯನ್ನು ತಿಳಿದವರು ರಾಮನವಮಿ, ಶಿವರಾತ್ರಿ ಮೊದಲಾದ ಅನೇಕ ಧಾರ್ಮಿಕ ಕಾರ್ಯಗಳನ್ನು ಕೂಡ ನಡೆಸಿಕೊಂಡೇ ಬಂದಿರುತ್ತಾರೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಕಾರ್ತೀಕ ಮಾಸದ ದಿನ ಹುಣ್ಣಿಮೆಯ ದಿನ ನಡೆಸುವ ಕಾರ್ತೀಕ ದೀಪೋತ್ಸವವು ಬಹಳ ಮಹತ್ವವನ್ನು ಪಡೆದಿರುತ್ತದೆ.
ಕಾಶಿಯಲ್ಲಿ ದೇವ ದೀಪಾವಳಿ ನಡೆಯುವಂತೆ ದೇವ ದೀಪೋತ್ಸವದ ದೀಪಾವಳಿಯಂತೆ ಈ ಬಾರಿ ಹನುಮಗಿರಿಯಲ್ಲಿ ಕೂಡ ದೊಡ್ಡ ಪ್ರಮಾಣದ ಕಾರ್ತೀಕ ಮಹಾ ದೀಪೋತ್ಸವವು ದಿನಾಂಕ ೧೫,೧೬ ಮತ್ತು ೧೭ನೇ ತಾರೀಖಿನವರೆಗೆ ನಡೆಯಲಿದೆ. ಈ ದೀಪವು ವಿಶೇಷ ರೀತಿಯಿಂದ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಪ್ರತಿ ತಿಂಗಳು ಮತ್ತು ವಿಶೇಷವಾಗಿ ಕಾರ್ತೀಕ ಮಾಸದಲ್ಲಿ ಯಾವ ರೀತಿಯಲ್ಲಿ ನಡೆಯುತ್ತಾ ಬಂದಿದೆಯೋ ಹಾಗೆ ಅಖಂಡವಾಗಿ ಮೂರು ದಿನಗಳು ದೀಪ ಉರಿಯುವಂತೆ ಆಯೋಜಿಸಲಾಗುತ್ತಿದೆ.
೧೫ನೇ ತಾರೀಖಿನಂದು ಸಂಜೆಯ ಸಮಯದಲ್ಲಿ ದೀಪ ಪ್ರಜ್ವಲನೆಯನ್ನು ಬೇಲಿಮಠದ ಸ್ವಾಮಿಗಳಾದ ಪೂಜ್ಯ ಶ್ರೀ ಶ್ರೀ ಶಿವಾನುಭವಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಅವರ ಜೊತೆಗೆ ಓಂಕಾರಶ್ರಮದ ಪೂಜ್ಯ ಶ್ರೀ ಶ್ರೀ ಮಧುಸೂಧನಾನಂದ ಪುರಿ ಸ್ವಾಮಿಜಿ ಹಾಗೂ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ ಇಲ್ಲಿಯ ಪೂಜ್ಯ ಶ್ರೀ ಶ್ರೀ ನಿರ್ಭಯಾನಂದ ಸರಸ್ವತಿ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ನಂತರ ಮೂರು ದಿನಗಳ ಕಾಲ ಅಖಂಡ ದೀಪವು ಪ್ರಜ್ವಲಿಸಲಿದ್ದು ಅದಕ್ಕೆ ಸೇವೆ ಸಲ್ಲಿಸಲು ಅಲ್ಲಿ ನಡೆಯುವ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹನುಮನ ಹಾಗೂ ರುದ್ರದೇವರ ಕೃಪೆಗೆ ಪಾತ್ರರಾಗೋಣ.
ಕಾರ್ಯಕ್ರಮದಲ್ಲಿ ಶ್ರದ್ಧೆ ಮತ್ತು ಭಕ್ತಿ ಭಾವದೊಂದಿಗೆ ವೇದ ಘೋಷಗಳ ಮೂಲಕ ಸ್ವಾಮೀಜಿ ಯವರ ಅಮೃತ ಹಸ್ತದಿಂದ ದೀಪ ಪ್ರಜ್ವಲನ ಮಾಡಿಸಿ, ಎಲ್ಲ ದೇವಾನು ದೇವತೆಗಳನ್ನು, ಜ್ಯೋತಿರಲಿಂಗಗಳು, ಶಕ್ತಿ ಪೀಠ ದೇವತೆಗಳು ಹಾಗೂ ಸ್ಥಳೀಯ ದೇವಾನುದೇವತೆಗಳನ್ನು ಆವಾಹನೆ ಮಾಡಿ ದೀಪದಲ್ಲಿ ಪ್ರತಿಷ್ಠಾಪಿಸಿ ಅವರೆಲ್ಲರನ್ನು ಜ್ಯೋತಿಯಲ್ಲಿ ದರ್ಶಿಸುವ, ಕಾಣುವ ಸುಂದರ ಸಂಜೆಯ ಕಾರ್ಯಕ್ರಮ ಇದಾನೆ. ನಂತರ ವೇದ ಘೋಷಗಳ ನಡುವೆ ಷೋಡಶೋಪಚಾರ ಪೂಜೆ ಅಷ್ಟಾವಧಾನ, ರುದ್ರ ಪಠಣಗಳ ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಪಾಲ್ಗೊಳ್ಳೋಣ ಬನ್ನಿ ಹಾಗೂ ದೈವಿ ಅನುಭುತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾಗೋಣ
-ಮಾಧುರಿ ದೇಶಪಾಂಡೆ, ಬೆಂಗಳೂರು