ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನ ಬೆಳ್ಳಿತೆರೆಗೆ ತರುವ ಉದ್ದೇಶದಿಂದ, ಕರಿಗಿರಿ ಫಿಲ್ಮ್ಸ್ “ಹರಿದಾಸರ ದಿನಚರಿ” ಚಿತ್ರವನ್ನು ನಿರ್ಮಿಸಿದೆ.ಸುಮಾರು ಒಂದೂವರೆ ಗಂಟೆಗಳಲ್ಲಿ ಶ್ರೀ ಪುರಂದರ ದಾಸರ ಒಂದು ದಿನದ ಜೀವನ ಯಾನವನ್ನು ಸಾಂಕೇತಿಕವಾಗಿ ತೆರೆದಿಡುವ ಮೂಲಕ ಸಮಗ್ರ ಭಾರತೀಯ ಆಧ್ಯಾತ್ಮಿಕ ಪ್ರಪಂಚದ ಚಟುವಟಿಕೆಗೆ ಕನ್ನಡಿ ಹಿಡಿಯುವ ಹರಿದಾಸರ ದಿನಚರಿ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್ ನೀಡಿದೆ. ಈ ಚಿತ್ರ 15 ನೇ ಶತಮಾನದ ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ದೈನಂದಿನ ಜೀವನದ ಮನೋಹರ ದೃಶ್ಯಗಳನ್ನು ಒಳಗೊಂಡಿದೆ.
“ಹರಿದಾಸರ ದಿನಚರಿ” ಜೀವನಚರಿತ್ರೆಯ ಚಿತ್ರವಲ್ಲ; ಇದು ಪ್ರೇಕ್ಷಕರನ್ನು ಆಳವಾದ ಭಕ್ತಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಯುಗಕ್ಕೆ ಕರೆದೊಯ್ಯುವ ಒಂದು ಅನುಭವ. ಪಾಂಡವಪುರ ಸಮೀಪದ ಕಾವೇರಿ ನದಿಯ ತೀರ ಕಲ್ಲು ಮಂಟಪಗಳು ಪ್ರಾಚೀನ ಶಿಲಾ ವೈಭವದ ದೇವಸ್ಥಾನಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು ಇಂತಹ ಚಿತ್ರ ಗಳು ಕೇವಲ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕೂಡ ಪ್ರದರ್ಶಿತವಾಗಬೇಕು ಎಂದು ಸೆನ್ಸಾರ್ ಮಂಡಳಿ ಸದಸ್ಯರು ಅಭಿಪ್ರಾಯಿಸಿದ್ದಾರೆ.
ಹರಿದಾಸರ ದಿನಚರಿ ಚಿತ್ರದ ಕುರಿತು ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.ಚಿತ್ರದ ತುಣುಕುಗಳನ್ನು ವೀಕ್ಷಿಸಿದ ಬಳಿಕ ನಿರ್ದೇಶಕ ಗಿರೀಶ್ ಚಿತ್ರೀಕರಣದ ಹಲವು ಘಟ್ಟಗಳನ್ನು ವಿವರಿಸಿದರು.ಡಾ. ವಿದ್ಯಾಭೂಷಣ, ಡಾ ವೀಣಾ ಬನ್ನಂಜೆ, ನಿರುಪಮಾ ರಾಜೇಂದ್ರ, ಡಾ ಜಯಂತ ವ್ಯಾಸನಕೆರೆ ಮುಂತಾದವರು ಉಪಸ್ಥಿತರಿದ್ದರು.
ಅದ್ಭುತ ದೃಶ್ಯಗಳು ಮತ್ತು ಆತ್ಮಸ್ಪರ್ಶಿ ನಿರೂಪಣೆಯ ಮೂಲಕ, ಚಿತ್ರವು ಪುರಂದರ ದಾಸರು ತಮ್ಮ ದಿನಚರಿಯಲ್ಲಿ ಮುನ್ನಡೆಯುವುದನ್ನು, ಅವರ ಪ್ರಸಿದ್ಧ “ಜಗದೋದ್ಧಾರನ ಆಡಿಸಿದಳೆ ಯಶೋದೆ” ಹಾಡನ್ನು ರಚಿಸುವುದನ್ನು ಮತ್ತು ತಮ್ಮ ದೈನಂದಿನ ಆಚರಣೆಗಳಲ್ಲಿ ತೊಡಗುವುದನ್ನು ಅನುಸರಿಸುತ್ತದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಗಿರೀಶ್ ತಿಳಿಸುತ್ತಾರೆ.
“ಹರಿದಾಸರ ದಿನಚರಿಚಿತ್ರದ ಟ್ರೈಲರ್ ಉಡುಪಿಯ ಶ್ರೀ ಕೃಷ್ಣ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಉಭಯಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಬಿಡುಗಡೆ ಆಗಿತ್ತು.
ನಿರ್ದೇಶಕ ಗಿರೀಶ್ ನಾಗರಾಜ್ ಅವರು ಚಿತ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದು’ ಹರಿದಾಸರ ದಿನಚರಿ’ ಮಹಾನ್ ಸಂತ-ಕವಿ ಶ್ರೀ ಪುರಂದರ ದಾಸರ ಜೀವನದ ಒಂದು ದಿನದ ಸಾರವನ್ನು ಸೆರೆಹಿಡಿಯುವ ಒಂದು ಪ್ರಯತ್ನ. ಕಲೆ ಮತ್ತು ಆಧ್ಯಾತ್ಮಿಕತೆಯನ್ನು ಮೆಚ್ಚುವ ಪ್ರೇಕ್ಷಕರೊಂದಿಗೆ ಇದು ಆಳವಾಗಿ ಪ್ರತಿಧ್ವನಿಸುತ್ತದೆ ಎಂದು ನಾವು ನಂಬುತ್ತೇವೆ.”ಅನ್ನುತ್ತಾರೆ.