ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಅದನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ತಿಳಿಸಿದರು.
ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಮೈಕ್ಯಾಪ್ಸ್ (ಮೈರಾಡ) ಸಂಸ್ಥೆಯ ಸಹಯೋಗದೊಂದಿಗೆ “ಹಸಿರು ನಾಳೆ ಮಲೆ ಮಹದೇಶ್ವರ ಬೆಟ್ಟ” ಯೋಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿ, ಬಟ್ಟೆ, ನಿರುಪಯುಕ್ತ ಪೇಪರ್, ಒಣ ಎಲೆಗಳನ್ನು ಸಂಗ್ರಹಣ ಮಾಡಲಾಗುತ್ತಿದೆ.
ಇದೀಗ ಪೌರಕಾರ್ಮಿಕರು ಹಸಿ ಕಸ ಒಣ ಕಸ ವನ್ನಾಗಿ ಬೇರ್ಪಡಿಸಿ ಯಾವ ಯಾವ ಪದಾರ್ಥಗಳನ್ನು ಮರುಬಳಕೆ ಮಾಡಲು ಯಾವ ರೀತಿ ಸಿದ್ಧಪಡಿಸಬಹುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ, ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದ್ದು ಮೈಕ್ಯಾಪ್ಸ್ ಸಂಸ್ಥೆಯ ವತಿಯಿಂದ 80 ಲಕ್ಷ ವೆಚ್ಚದ ಮಿಷನರಿಗಳನ್ನು ಖರೀದಿಸಲಾಗಿದ್ದು ಕಸದಿಂದ ರಸ ಮಾಡುವ ಈ ಒಂದು ಕಾರ್ಯಕ್ರಮವನ್ನು ಜನವರಿ ತಿಂಗಳಿನಿಂದ ಪ್ರಾರಂಭಿಸಲಾಗುವುದು, ಮರುಬಳಕೆಯಿಂದ ಬರುವ ಲಾಭವನ್ನು ನಮ್ಮ ಪೌರಕಾರ್ಮಿಕರಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಈಗಾಗಲೇ ಶ್ರೀ ಕ್ಷೇತ್ರದಲ್ಲಿ ಸಂಗ್ರಹವಾಗುವ ಚಪ್ಪಲಿ ಬಟ್ಟೆಯನ್ನು ಸಿಮೆಂಟ್ ಕಂಪನಿಗೆ ನೀಡಲು, ಶ್ರೀ ಕ್ಷೇತ್ರದ ದಾಸೋಹ ಭವನದಲ್ಲಿ ಭಕ್ತರು ಪ್ರಸಾದ ತಿಂದು ಬಿಡುವ ತ್ಯಾಜ್ಯ ಆಹಾರ ಪದಾರ್ಥಗಳಿಂದ ಬಯೋಗ್ಯಾಸ್ ಒಣ ಎಲೆಗಳಿಂದ ಗೋಬರ್ ಗ್ಯಾಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.ಇನ್ನು ಶ್ರೀ ಕ್ಷೇತ್ರದಲ್ಲಿರುವ ಪೌರಕಾರ್ಮಿಕರು ಯಾವ ಯಾವ ತ್ಯಾಜ್ಯ ಪದಾರ್ಥಗಳನ್ನು ಯಾವ ರೀತಿ ಪ್ರತ್ಯೇಕವಾಗಿ ಸಂಗ್ರಹಣೆ ಮಾಡಬೇಕು, ಯಾವ ರೀತಿ ವಿಲೇವಾರಿ ಮಾಡಿ ಮರುಬಳಕೆ ಮಾಡಬಹುದು ಎಂಬುದರ ವಿಶೇಷ ತರಬೇತಿ ನೀಡಿ ಪೌರಕಾರ್ಮಿಕರಿಗೆ ಪ್ರತ್ಯೇಕ ಪರಿಕರಗಳು, ಸಮವಸ್ತ್ರ ವಿತರಿಸಲಾಗುವುದು ಎಂದರು.
ಸಭೆಯಲ್ಲಿ ಮೈರಾಡ ಸಂಸ್ಥೆಯ ನಿರ್ದೇಶಕ ಅಶ್ರಫ್, ಮಲೆ ಮಹದೇಶ್ವರ ಬೆಟ್ಟದ ವಲಯ ಅರಣ್ಯಾಧಿಕಾರಿ ಅಮಿತ್, ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಪೌರಕಾರ್ಮಿಕ ಸಿಬ್ಬಂದಿಗಳು ಮೈರಾಡ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಹಾಜರಿದ್ದರು.