ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಘಟನೆ ಚರ್ಚೆಗೆ ಗ್ರಾಸವಾಗಿರುವ ನಡುವಲ್ಲೇ ಹಸುಗಳ ಮಾಲೀಕರಿಗೆ ವೈಯಕ್ತಿಕವಾಗಿ ಪರಿಹಾರ ಕೊಡುತ್ತೇನೆಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ವಿಚಾರ ತಿಳಿದ ತಕ್ಷಣ ಮುಖ್ಯಮಂತ್ರಿಗಳು ಕಮಿಷನರ್ಗೆ ಕರೆ ಮಾಡಿ ಹೇಳಿದ್ದಾರೆ. ಕೃತ್ಯ ಎಸಗಿದವರು ಯಾರೇ ಆಗಿರಲಿ, ಕೂಡಲೇ ಬಂಧಿಸುವಂತೆ ಹೇಳಿದ್ದಾರೆ ಎಂದು ಹೇಳಿದರು.
ಪ್ರಾಣಿಗಳ ಮೇಲೆ ಯಾಕೆ ದ್ವೇಷ, ಈ ರೀತಿ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷ, ಗಲಾಟೆ ಇದ್ದರೂ ಈ ರೀತಿ ಮಾಡಬಾರದು. ನಾನು ಕೂಡ ಪೊಲೀಸರಿಗೆ ಹೇಳಿದ್ದೇನೆ. ಯಾರೇ ಆದರೂ ಅವರ ಮೇಲೆ ಕಠಿಣ ಕ್ರಮ ಆಗಬೇಕು. ಮಾಲೀಕನಿಗೆ ವೈಯಕ್ತಿಕವಾಗಿ ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನು ಇದೀನಿ ಎಂದು ತಿಳಿಸಿದರು. ಇದೇ ವೇಳೆ ಹಸು ಕೊಡಿಸೋ ಜವಾಬ್ದಾರಿ ನಿನ್ನದು ಎಂದು ವಿನಯ್ ಎಂಬಾತನಿಗೆ ಜಮೀರ್ ಅವರು ಸೂಚನೆ ನೀಡಿದರು.