ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕತ್ತರಿಸಿ ತೀವ್ರವಾಗಿ ಗಾಯಗೊಳಿಸಿದ ಘಟನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎಚ್ಚೆತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಪಶುಸಂಗೋಪನಾ ಇಲಾಖೆಯು 1533 ಸಹಾಯವಾಣಿಯ ಮೂಲಕ ಪ್ರಾಣಿ ಕಲ್ಯಾಣ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ತೆಗೆದುಕೊಂಡಿದೆ ಎಂದು ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಅವರು ಕಿಶೋರ್ ತಿಳಿಸಿದ್ದಾರೆ.
ಭಾನುವಾರದ ಘಟನೆಯ ನಂತರ, ಸಂಬಂಧಪಟ್ಟ ನಾಗರಿಕರು ಮತ್ತು ಕಾರ್ಯಕರ್ತರು ವಾಟ್ಸಾಪ್, ಫೇಸ್ಬುಕ್ ಗುಂಪುಗಳು, ಸಹಾಯಕ ನಿರ್ದೇಶಕರಿಗೆ ವೈಯಕ್ತಿಕ ಫೋನ್ ಕರೆಗಳು ಮತ್ತು ಇಮೇಲ್ಗಳ ಮೂಲಕ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ ಬಿಬಿಎಂಪಿ ಸಮಸ್ಯೆ ಪರಿಹರಿಸಲು ಸಹಾಯವಾಣಿ ಆರಂಭಿಸಿದೆ.
ಪ್ರಾಣಿಗಳ ಜನನ ನಿಯಂತ್ರಣ, ರೇಬೀಸ್ ವಿರೋಧಿ ಲಸಿಕೆ ವಿನಂತಿಗಳು ಮತ್ತು ನಾಯಿ ಕಡಿತ ನಿರ್ವಹಣೆಯಂತಹ ಸಾಮಾನ್ಯ ದೂರುಗಳ ಹೊರತಾಗಿ, ನಾವು ಈಗ ಪ್ರಾಣಿಗಳ ಆಹಾರ, ಕಿರುಕುಳ ಮತ್ತು ಕ್ರೌರ್ಯ, ಪ್ರಾಣಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಹಾಗೂ ಪರವಾನಗಿ ವಿಷಯಗಳಲ್ಲಿ ಸಹಾಯ ನೀಡುತ್ತಿದ್ದೇವೆ” ಎಂದು ಕಿಶೋರ್ ಹೇಳಿದ್ದಾರೆ.
ನಾಗರಿಕರು 1533 ಸಹಾಯವಾಣಿಗೆ ಕರೆ ಮಾಡುವ ಮೂಲಕ ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ತಮ್ಮ ಮನವಿಗಳನ್ನು ಸಲ್ಲಿಸಬಹುದು ಅಥವಾ ಬೆಂಗಳೂರು ಒನ್ ಸಿಟಿ ಒನ್ ಮೊಬೈಲ್ ಅಪ್ಲಿಕೇಶನ್ಗೆ ಲಾಗಿನ್ ಮಾಡುವ ಮೂಲಕ ಪಾಲಿಕೆಯನ್ನು ಸಂಪರ್ಕಿಸಬಹುದು. ಮನವಿ ಸಲ್ಲಿಸಿದ ನಂತರ, ಪಶುವೈದ್ಯಕೀಯ ನಿರೀಕ್ಷಕರು ಮತ್ತು ಕ್ರೌರ್ಯ ತಡೆ ಅಧಿಕಾರಿಗಳನ್ನು ಸಮಸ್ಯೆ ಪರಿಹರಿಸಲು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಪ್ರತಿ ವಿನಂತಿಗೆ ಪ್ರತಿಕ್ರಿಯೆ ಸಮಯವನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸಹಾಯವಾಣಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಕಿಶೋರ್ ಮನವಿ ಮಾಡಿದ್ದಾರೆ.