ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಅಜೇಯ ದಾಖಲೆಯೊಂದಿಗೆ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ನಡೆದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಅಮೋಘ ಲಯ ಮುಂದುವರೆಸಿದ ತಾರಾ ಸ್ಟ್ರೈಕರ್ ದೀಪಿಕಾ ಕೊನೆಯ ಕ್ವಾರ್ಟರ್ನಲ್ಲಿ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಗೋಲುಗಳಲ್ಲಿ (47, 48ನೇ ನಿಮಿಷ) ಪರಿವರ್ತಿಸಿದರು. ಉಪನಾಯಕಿ ನವನೀತ್ ಕೌರ್ (37ನೇ ನಿಮಿಷ) ಒಂದು ಗೋಲು ಹೊಡೆದರು.
ಈ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯಗಳಿಂದ 15 ಅಂಕ ಕಲೆ ಹಾಕಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮಂಗಳವಾರ ನಡೆಯುವ ಸೆಮಿಫೈನಲ್ನಲ್ಲಿ ಭಾರತ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ತಂಡವನ್ನು ಎದುರಿಸಲಿದೆ.