ಎಂ ಎನ್ ಕೋಟೆ : ಕೆಲಸದ ನಿಮಿತ್ತ ಗುಬ್ಬಿ ಎಪಿಎಂಸಿ ಕಚೇರಿ ಒಳ ತೆರಳಿ ಐದು ನಿಮಿಷ ಮರಳಿ ವಾಪಸ್ ಕಾರಿನ ಬಳಿಗೆ ಬರುವ ವೇಳೆಗೆ ಕಾರಿನ ಗ್ಲಾಸ್ ಒಡೆದು ಚೀಲದಲ್ಲಿದ್ದ ಹದಿನೈದು ಲಕ್ಷ ರೂ ಕಳ್ಳತನ ಆಗಿರುವ ಅಚ್ಚರಿಯ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ನಿಟ್ಟೂರು ಎಸ್ ಬಿಐ ಬ್ಯಾಂಕ್ ನಿಂದ ಕಡಬ ಹೋಬಳಿ ಡಿ.ರಾಂಪುರ ಗ್ರಾಮದ ವರ್ತಕ ಶಿವರಾಜ್ ಹದಿನೈದು ಲಕ್ಷ ರೂಗಳನ್ನು ಪಡೆದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗುಬ್ಬಿ ಪಟ್ಟಣದ ಎಪಿಎಂಸಿ ಕಚೇರಿಗೆ ಕಾರ್ಯನಿಮಿತ್ತ ಆಗಮಿಸಿದ್ದರು. ಕಚೇರಿ ಒಳಗೆ ತೆರಳಿ ಐದೇ ನಿಮಿಷದಲ್ಲಿ ಹೊರ ಬಂದು ನೋಡಿದಾಗ ಕಾರಿನ ಡ್ರೈವರ್ ಭಾಗದ ಕಿಟಿಕಿ ಗಾಜು ಒಡೆದು ಪುಡಿಯಾಗಿತ್ತು. ಬಿಸಿಲಿಗೆ ಒಡೆದಿರಬಹುದು ಎಂದು ತಿಳಿದ ಕೊಬ್ಬರಿ ವರ್ತಕ ಶಿವರಾಜ್ ಗೆ ಅಚ್ಚರಿ ಆತಂಕ ಒಟ್ಟಿಗೆ ಎದುರಾಯಿತು. ಮುಂದಿನ ಸೀಟ್ ನಲ್ಲಿಟ್ಟಿದ್ದ ಹದಿನೈದು ಲಕ್ಷ ರೂಗಳ ಕೈ ಚೀಲ ಮಂಗಮಾಯ ಆಗಿತ್ತು.
ಕೂಡಲೇ ಗುಬ್ಬಿ ಪೊಲೀಸ್ ಠಾಣೆಗೆ ತೆರಳಿದ ನಿಟ್ಟೂರು ಭವಾನಿ ಟ್ರೇಡರ್ಸ್ ಮಾಲೀಕ ಮಂಡಿ ವರ್ತಕ ಶಿವರಾಜ್ ದೂರು ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.