ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ವಿರುದ್ಧದ ಹಿಂಸಾಚಾರಕ್ಕೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಇದೀಗ ದೆಹಲಿ ವ್ಯಾಪಾರಿಗಳು ಬಾಂಗ್ಲಾದೇಶಕ್ಕೆ ಮರ್ಮಾಘಾತ ನೀಡಿದ್ದಾರೆ.
ಹೌದು.. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಉಗ್ರವಾಗಿ ಖಂಡಿಸಿರುವ ದೆಹಲಿ ಆಟೋ ಪಾರ್ಟ್ಸ್ ವ್ಯಾಪಾರಿಗಳು, ಇನ್ನು ಮುಂದೆ ಬಾಂಗ್ಲಾದೇಶಕ್ಕೆ ವಾಹನಗಳ ಬಿಡಿಭಾಗಗಳನ್ನು ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.
ಅಕ್ಷರಶಃ ದೆಹಲಿಯ ಆಟೋ ಪಾರ್ಟ್ಸ್ ವ್ಯಾಪಾರಿಗಳು ಬಾಂಗ್ಲಾದೇಶದೊಂದಿಗೆ ವ್ಯವಹಾರವನ್ನು ಬಹಿಷ್ಕರಿಸಿದ್ದಾರೆ. ದೆಹಲಿಯ ಕಾಶ್ಮೀರ್ ಗೇಟ್ನಲ್ಲಿರುವ ಆಟೋ ಪಾರ್ಟ್ಸ್ ವ್ಯಾಪಾರಿಗಳು ನೆರೆಯ ದೇಶದೊಂದಿಗೆ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಹಿಂದೂಗಳ’ ಮೇಲಿನ ಹಿಂಸಾಚಾರ ಮತ್ತು ಬಾಂಗ್ಲಾದೇಶದಲ್ಲಿ ದೇವಾಲಯಗಳ ಮೇಲಿನ ‘ದಾಳಿ’ಗಳ ವರದಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟ ಹೇಳಿದೆ. ‘ಹಿಂದೂಗಳ’ ವಿರುದ್ಧ ನಡೆದ ದೌರ್ಜನ್ಯಗಳು ಮತ್ತು ದೇವಾಲಯಗಳ ಮೇಲಿನ ಇತ್ತೀಚಿನ ‘ದಾಳಿ’ಗಳಿಗೆ ಪ್ರತಿಕ್ರಿಯೆಯಾಗಿ ಕಾಶ್ಮೀರ್ ಗೇಟ್ ಆಟೋ ಪಾರ್ಟ್ಸ್ ಮಾರುಕಟ್ಟೆಯು ಬಾಂಗ್ಲಾದೇಶದೊಂದಿಗೆ ಜನವರಿ 15ರವರೆಗೂ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಆಟೋಮೋಟಿವ್ ಪಾರ್ಟ್ಸ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿನಯ್ ನಾರಂಗ್ ಹೇಳಿದ್ದಾರೆ.