ರಾಮೇಶ್ವರಂ: ಹಿಂದೂಗಳ ಪವಿತ್ರ ಕ್ಷೇತ್ರ ರಾಮೇಶ್ವರಂನ ಅಗ್ನಿತೀರ್ಥಂ ಬೀಚ್ನಲ್ಲಿ ಡ್ರೆಸ್ ಬದಲಾಯಿಸುವ ಕೊಠಡಿಯೊಳಗೆ ರಹಸ್ಯ ಕ್ಯಾಮೆರಾ ಬಳಸಿ ಮಹಿಳೆಯರನ್ನು ಚಿತ್ರೀಕರಿಸಿದ ಇಬ್ಬರನ್ನು ಬಂಧಿಸಲಾಗಿದೆ. ರಾಮೇಶ್ವಂರ ರಾಮನಾಥಸ್ವಾಮಿ ದೇವಾಲಯಕ್ಕೆ ಹೆಸರುವಾಸಿಯಾಗಿದೆ.
ಬಂಧಿತ ಇಬ್ಬರನ್ನು ರಾಜೇಶ್ ಕಣ್ಣನ್ ಮತ್ತು ಆತನ ಸ್ನೇಹಿತ ಮೀರಾನ್ ಮೊಯ್ದೀನ್ ಎಂದು ಗುರುತಿಸಲಾಗಿದೆ. ಸೋಮವಾರ ಪುದುಕೊಟ್ಟೈ ಮೂಲದ ಮಹಿಳೆಯೊಬ್ಬರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ಪತ್ತೆ ಹಚ್ಚಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಕಂಡು ಬೆಚ್ಚಿಬಿದ್ದ ಮಹಿಳೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಹಿಡನ್ ಕ್ಯಾಮರಾ ಪತ್ತೆಯಾಗಿದೆ.
ರಾಮೇಶ್ವರಂ ಪಟ್ಟಣವು ಅರವತ್ತನಾಲ್ಕು ‘ತೀರ್ಥಗಳು’ ಅಥವಾ ಪವಿತ್ರ ಜಲಮೂಲಗಳನ್ನು ಒಳಗೊಂಡಿದೆ. ಇವುಗಳಲ್ಲಿ 22 ರಾಮನಾಥಸ್ವಾಮಿ ದೇವಸ್ಥಾನದ ವ್ಯಾಪ್ತಿಯಲ್ಲಿವೆ. ಈ ತೀರ್ಥಗಳಲ್ಲಿ ಸ್ನಾನ ಮಾಡುವುದು ತಪಸ್ಸಿಗೆ ಸಮ ಎಂಬುದು ನಂಬಿಕೆಯಾಗಿದೆ.
ಅಗ್ನಿತೀರ್ಥಂ ಬೀಚ್ ರಾಮೇಶ್ವರಂನ ಪ್ರಮುಖ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿದೆ. ಅಗ್ನಿ ತೀರ್ಥವನ್ನು ದೇವಾಲಯಕ್ಕೆ ಸಂಬಂಧಿಸಿದ ಪ್ರಾಥಮಿಕ ಕಡಲತೀರವೆಂದು ಪರಿಗಣಿಸಲಾಗಿದೆ.