ಚೆನ್ನೈ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಇವಿಕೆಎಸ್ ಇಳಂಗೋವನ್ ಅವರು ಶನಿವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಈರೋಡ್ ಪೂರ್ವ ಕ್ಷೇತ್ರದ ಶಾಸಕರಾಗಿದ್ದ 75 ವರ್ಷದ ಇಳಂಗೋವನ್ ಅವರು ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನವೆಂಬರ್ 11 ರಂದು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ಸಿಬ್ಬಂದಿಯ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಇಳಂಗೋವನ್ ಅವರ ನಿಧನ ಪಕ್ಷಕ್ಕೆ “ದೊಡ್ಡ ನಷ್ಟ” ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಸೆಲ್ವಪೆರುಂಥಗೈ ಅವರು ಹೇಳಿದ್ದಾರೆ.
ಇಳಂಗೋವನ್ ಅವರು ಪ್ರಾಮಾಣಿಕವಾಗಿ ಮಾತನಾಡುವ ವ್ಯಕ್ತಿಯಾಗಿದ್ದು, ಅವರ ನಿಧನವು ಅವರ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ.