ದೊಡ್ಡಬಳ್ಳಾಪುರ: ತಾಲ್ಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಡಿ. ಸತ್ಯ ನಾರಾಯಣಗೌಡ (೮೬) ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.ಮಧುರೆ ಹೋಬಳಿ ಚನ್ನಾದೇವಿ ಅಗ್ರಹಾರ ಗ್ರಾಮದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿ ಅವರು ದೊಡ್ಡಬಳ್ಳಾಪುರಕ್ಕೆ ಬಂದಾಗಲೂ ಅವರೊಂದಿಗೆ ಹೆಚ್ಚು ಪರಿಚಯ ಇದ್ದವರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸೇರಿದಂತೆ ಕಾಂಗ್ರೆಸ್ ಪಕ್ಷದ ಪಾಳಯದಲ್ಲಿ ಹಿರಿಯರೊಂದಿಗೆ ಗುರುತಿಸಿಕೊಂಡಿದ್ದರು.೧೯೬೦ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಹೈಕೋರ್ಟ್ ವಕೀಲ ಸಿ.ಎಸ್. ಗಿರೀಶ್ಕುಮಾರ್ ಸೇರಿದಂತೆ ಮೂರು ಜನ ಪುತ್ರರು ಇದ್ದಾರೆ.ಮೃತರ ಅಂತ್ಯಕ್ರಿಯೆ ಚನ್ನಾದೇವಿ ಅಗ್ರಹಾರ ಗ್ರಾಮದಲ್ಲಿ ಮಂಗಳವಾರ ನಡೆಯಿತು.