ಬೆಂಗಳೂರು: ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟಿದ್ದು, ಹುಟ್ಟು ಹಬ್ಬದಂದೇ ಮಸಣ ಸೇರಿದ್ದಾನೆ. ಭಾನು ತೇಜ (12) ಮೃತ ಬಾಲಕ.
ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾದ ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯಲು ಗುರುಗಳ ಜೊತೆಗೆ ವಾಸವಾಗಿದ್ದನು. ಶನಿವಾರ ಭಾನು ತೇಜನ ಹುಟ್ಟುಹಬ್ಬವಿತ್ತು. ಹುಟ್ಟು ಹಬ್ಬ ಆಚರಣೆಗಾಗಿ ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಹೊಗಿದ್ದನು. ಹುಟ್ಟು ಹಬ್ಬ ಆಚರಣೆ ಬಳಿಕ ರಾತ್ರಿ 11.20ರ ಸುಮಾರಿಗೆ ಅಣ್ಣ ಚಕ್ರಧರಣ್ ಜೊತೆಗೆ ಬೈಕ್ನಲ್ಲಿ ವಾಪಸ್ ಆರ್ಟಿ ನಗರದತ್ತ ತೆರಳುತ್ತಿದ್ದನು.
ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಷರ್ ಟ್ರಕ್ವೊಂದು ಹಿಂಬದಿಯಿಂದ ಭಾನು ತೇಜ್ ಇದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾನು ತೇಜ್ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕ ತಲೆಯ ಮೇಲೆ ಟ್ರಕ್ನ ಎರಡು ಚಕ್ರಗಳು ಹಿರಿದಿವೆ. ಭಾನು ತೇಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಕ್ರಧರಣ್ಗೆ ಸಣ್ಣ-ಪುಟ್ಟ ಗಾಯಗಳಾವಿವೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಟ್ರಾಫಿಕ್ ಠಾಣೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಭಾನು ತೇಜಾ ಮಾವ ಆನಂದ್ ಮಾತನಾಡಿ, ಭಾನು ತೇಜಾ ತಂದೆಗೆ ಮಗು ವೇದ ಕಲಿಯಬೇಕೆಂಬ ಆಸೆ ಇತ್ತು. ಒಂದು ತಿಂಗಳ ಹಿಂದೆ ವೇದ ಕಲಿಯಲು ಮಗುವನ್ನ ಬಿಟ್ಟಿದ್ದರು. ಶನಿವಾರ ಮಗುವಿನ ಹುಟ್ಟುಹಬ್ಬವಿತ್ತು. ಅವನು ಅಕ್ಕನ ಮನೆಗೆ ಬಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದನು. ಊಟ ಮಾಡಿ ಸಂಜೆ ಹೊರಡಬೇಕಾದರೆ ಅವಘಡ ನಡೆದಿದೆ ಎಂದು ಹೇಳಿದರು.