ದೊಡ್ಡಬಳ್ಳಾಪುರ: ಕರ್ತವ್ಯದ ವೇಳೆ ದುಷ್ಟರಿಂದ ಹುತಾತ್ಮರಾದ ಪಿ.ಎಸ್.ಐ ಜಗದೀಶ್ ರವರ 9ನೇ ವರ್ಷದ ಪುಣ್ಯ ಸ್ಮರಣೆ ದಿನಾಚರಣೆಯನ್ನು ನಗರದ ಹೊರವಲಯದ ಡಿ.ಕ್ರಾಸ್ ಬಳಿಯ ಪಿ ಎಸ್ ಐ ಜಗದೀಶ ವೃತ್ತದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ ಘಟ್ಟ ರವಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ಹಾಗೂ ಬೇರೆ ರಾಜ್ಯಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಕಷ್ಟವಾಗಿದೆ. ಆದ್ದರಿಂದ, ಉನ್ನತ ಅಧಿಕಾರಿಗಳಿಂದ ಸಹಾಯ ಪಡೆದು ಹುತಾತ್ಮ ಪಿ ಎಸ್ ಐ ಜಗದೀಶ್ ರವರ ಹೆಸರಿನಲ್ಲಿ ಐ ಎ ಎಸ್, ಐ ಪಿ ಎಸ್ ಹಾಗೂ ಕೆ ಪಿ ಎಸ್ ಸಿ ಪರೀಕ್ಷಾ ತರಬೇತಿ ಕೇಂದ್ರ ತೆರೆದು ನುರಿತ ಶಿಕ್ಷಕರಿಂದ ಶಿಕ್ಷಣ ನೀಡಲಾಗುವುದು ಎಂದರು.
ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ್ ಪಾಷ ಮಾತನಾಡಿ, ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ನಾವು ಸಮಾಜದಲ್ಲಿ ತಪ್ಪು ಮಾಡುವ ಸಮಾಜ ಘಾತುಕರ ಮೇಲೆ ಕಠಿಣ ಕ್ರಮಜರುಗಿಸಬೇಕಾಗುತ್ತದೆ. ಆದರೆ ಇಂತಹ ಸಂದರ್ಭಗಳಲ್ಲಿ ನಾವು ಜೀವದ ಹಂಗು ತೊರೆದು ಸೆಣಸಾಟ ನಡೆಸಬೇಕಾಗುತ್ತದೆ,ಇಂತಹುದೇ ಸಂದರ್ಭದಲ್ಲಿ ಪಿಎಸ್ಐ ಜಗದೀಶ್ ಅವರು ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ತಮ್ಮ ಜೀವಕಳೆದುಕೊಂಡಿರುತ್ತಾರೆ. ಇವರನ್ನು ನೆನಸುತ್ತಾ ಹುತಾತ್ಮ ಅಧಿಕಾರಿಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪಿಎಸ್ಐ ಜಗದೀಶ್ ರವರ ಒಂಭತ್ತನೆ ಹುತಾತ್ಮ ದಿನಾಚರಣೆ ಅಂಗವಾಗಿ ನಗರ ಠಾಣೆ ಪಿಎಸ್ಐ ಕೃಷ್ಣಪ್ಪ, ಎಎಸ್ಐ ಕೃಷ್ಣಮೂರ್ತಿ ಪೇದೆಗಳಾದ ಪಾಂಡುರಂಗ, ಪ್ರಕಾಶ್ ಹಾಗೂ ಯೋಗಶ್ರೀ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ವಿದ್ಯಾ ವಿಭಾ ರಾಥೋಡ್, ನಗರಸಭಾ ಉಪಾಧ್ಯಕ್ಷ ಮಲ್ಲೇಶ್ ಹಾಗು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರ್ ಉಪ್ಪಾರ್, ಹುತಾತ್ಮ ಪಿ ಎಸ್ ಐ ಜಗದೀಶರವರ ಮಡದಿ, ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.