ನವದೆಹಲಿ: ಪೂಜಾ ಖೇಡ್ಕರ್ ವಿವಾದದ ನಡುವೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರಾವಧಿ 2029ಕ್ಕೆ ಕೊನೆಗೊಳ್ಳಬೇಕಿತ್ತು, ಐದು ವರ್ಷಗಳಿರುವಾಗಲೇ ಅವರು ರಾಜೀನಾಮೆ ನೀಡಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ಮನೋಜ್ ಸೋನಿ ರಾಜೀನಾಮೆಗೂ ಪೂಜಾ ಖೇಡ್ಕರ್ ವಿವಾದಕ್ಕೂ ಸಂಬಂಧವಿಲ್ಲ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಪೂಜಾ ಖೇಡ್ಕರ್ ಅವರ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಹೊರಗೆ ತುಂಬಾ ಜನ ಕೇಂದ್ರ ಲೋಕಸೇವಾ ಆಯೋಗದ ಯೂ ಪಿ ಎಸ್ ಸಿ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದ್ದರು. ಹಣ ಮತ್ತು ರಾಜಕೀಯ ಪ್ರಭಾವ ಇದ್ದರೆ ಯೂ ಪಿ ಎಸ್ ಸಿ ಯಲ್ಲಿ ಒಳ್ಳೇ ರಾಂಕಿಂಗ್ ಸಿಗುತ್ತೆ ಎಂಬ ಮಾತು ದೊಡ್ಡದಾಗಿ ಕೇಳಿ ಬಂದಿರುವ ಸಮಯದಲ್ಲಿಯೇ ಸೋನಿಯವರು ರಾಜೀನಾಮೆ ನೀಡಿರು ವುದು ಕಾಕತಾಳೀಯವೇನು ಅಲ್ಲ.
ಯಾಕೆಂದರೆ, ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ವಿರೋಧ ಪಕ್ಷಗಳು ಯೂ ಪಿ ಎಸ್ ಸಿ ವಿಚಾರ ಎತ್ತಿಕೊಂಡು ಮತ್ತೆ ಸರಕಾರದ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಅದನ್ನು ತಪ್ಪಿಸಿಕೊಳ್ಳಲು ಈ ರೀತಿ ಕ್ರಮಕ್ಕೆ ಸರಕಾರವೇ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಪ್ರಕಾರ ಮನೋಜ್ ಸೋನಿ ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋನಿ 2017ರಲ್ಲಿ ಆಯೋಗದ ಸದಸ್ಯರಾಗಿ ಸೇರಿದ್ದರು. ಮೇ 16, 2023ರಂದು ಅವರನ್ನು ಯುಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರು ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು ಆದರೆ, ಅವರು ರಿಲೀವ್ ಆಗುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ನೂತನ ಅಧ್ಯಕ್ಷರ ಹೆಸರನ್ನು ಸರ್ಕಾರ ಪ್ರಕಟಿಸಿಲ್ಲ.ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ಮನೋಜ್ ಸೋನಿ ತಿಳಿಸಿದ್ದರಾದರೂ, ಆದರೆ ಅವರ ರಾಜೀನಾಮೆಯನ್ನು ಈವರೆಗೂ ಅಂಗೀಕರಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.