ಹಾಸನ: ಶಾಲೆಯಲ್ಲಿದ್ದಾಗ ಬಾಲಕನೋರ್ವನಿಗೆ ಎದೆ ನೋವು ಕಾಣಿಸಿಕೊಂಡು ಸಾವಿಗೀಡಾಗಿರುವ ಘಟನೆ ಆಲೂರು ತಾಲೂಕಿನ ಚನ್ನಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ 11 ವರ್ಷದ ಸಚಿನ್ ಎಂಬಾ ವಿದ್ಯಾರ್ಥಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ತರಗತಿಯಲ್ಲಿದ್ದಾಗ ಆತನಿಗೆ ಎದೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಪೋಷಕರಿಗೆ ಸುದ್ದಿ ಮುಟ್ಟಿಸಿ, ಪೋಷಕರು ಬಂದು ಆತನನ್ನು ಮಾತನಾಡಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆತ ಮಾತನಾಡದೆ ಇದ್ದಾಗ ಆಸ್ಪತ್ರೆಗೆ ಕರೆದೊಯ್ದು ವೈದ್ಯರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ತಿಳಿದುಬಂದಿದೆ. ಮೃತ ಬಾಲಕ ಚನ್ನಪುರ ಗ್ರಾಮದ ಕಾವ್ಯಶ್ರೀ ಎಂಬುವರ ಮಗ ಎಂದು ಹೇಳಲಾಗಿದೆ.