ರಾಮನಗರ: ಹೃದಯಾಘಾತ ಸಂಭವಿಸಿದ ಸಂದರ್ಭದ ಗೋಲ್ಡನ್ ಹವರ್ನಲ್ಲಿ ಜೀವರಕ್ಷಕ ಚುಚ್ಚುಮದ್ದು ನೀಡುವ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದರು.ಗುರುವಾರ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚೇಗೌಡನ ಪಾಳ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ನಿರ್ಮಿಸಲಾಗಿರುವ ನ್ರತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಪುನೀತ್ ಹೃದಯ ಜ್ಯೋತಿ ಯೋಜನೆ ನೂರಾರು ಜನರ ಬದುಕನ್ನು ಉಳಿಸಿದೆ, ಇದೂವರೆಗೆ 250 ಜನರನ್ನು ರಕ್ಷಿಸಲಾಗಿದೆ, ರಾಜ್ಯದ 74 ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ, ಹೃದಯ ಸ್ತಂಭನವಾದಾಗ ವ್ಯಕ್ತಿಗೆ ಒಂದರಿಂದ ಮೂರು ಗಂಟೆ ಅವಧಿಯೊಳಗೆ ಜೀವರಕ್ಷಕ ಚುಚ್ಚುಮದ್ದು ನೀಡುವ ಈ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವಿಸ್ತರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಹಾಗಾಗಿ ಈ ಯೋಜನೆಯನ್ನು ಮುಂಬರುವ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯನ್ನು ರೂಪಿಸಿದೆ, ಅದುವೇ ಗೃಹ ಆರೋಗ್ಯ ಯೋಜನೆ. ಪ್ರತಿಯೊಂದು ಮನೆಗೆ ತೆರಳಿ ಮನೆಯ ಸದಸ್ಯರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಅವರಲ್ಲಿರುವ ಕಾಯಿಲೆಯನ್ನು ಗುರುತಿಸಿ, ಅದನ್ನು ನಿಯಂತ್ರಿಸುವ ಕೆಲಸವನ್ನು ಈ ಯೋಜನೆಯ ಮೂಲಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ದೃಷ್ಟಿ ದೋಷಕ್ಕೆ ಉಚಿತ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆ ಇದೀಗ ಎಂಟು ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿದ್ದು, ಆ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆ ಮೂಲಕ ಕಣ್ಣಿನ ದೋಷವುಳ್ಳವರಿಗೆ ಉಚಿತವಾಗಿ ಆಪರೇಷನ್ ನಡೆಸಿ ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದವರು ಹೇಳಿದರು.
ಈ ವರ್ಷದ ಏಪ್ರಿಲ್ ನಂತರ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂಗಳ ಗೌರವಧನ ನೀಡುವ ಹೆಜ್ಜೆ ಇಡಲಾಗಿದೆ, ರಾಜ್ಯದಲ್ಲಿರುವ ಆರೋಗ್ಯ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಈ ಇಲಾಖೆ ಅವಲಂಬಿತವಾಗಿದೆ, ವೈದ್ಯರು ಹಾಗೂ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು, ಆಗ ಸಾಕಷ್ಟು ಸಮಸ್ಯೆಗಳು ನೀಗುತ್ತವೆ, ವೈದ್ಯರು ಸಹಾನುಭೂತಿಯಿಂದ ರೋಗಿಗಳನ್ನು ತಪಾಸಣೆ ಮಾಡಬೇಕು, ಉತ್ತಮ ವರ್ತನೆ ತೋರಬೇಕು, ರೋಗಿಗಳಲ್ಲಿ ಧೈರ್ಯ ತುಂಬಿದಾಗ ಮಾತ್ರ ಅವರಿಗೆ ಮಾನಸಿಕವಾಗಿ ಗಟ್ಟಿಯಾಗುತ್ತಾರೆ ಎಂದ ಸಚಿವರು ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಸಾಯನ್ ಯಂತ್ರ ದುರಸ್ತಿ ಪಡಿಸಲಾಗುವುದು ಹಾಗೂ ಎಮ್.ಆರ್.ಐ ಯಂತ್ರವನ್ನು ಎರಡು ತಿಂಗಳೊಳಗೆ ಒದಗಿಸಲಾಗುವುದು ಎಂದರು.
ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಮಾತನಾಡಿ, ಬದಲಾದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳು ಬಂದಿವೆ, ಹೃದಯಾಘಾತ ಕೇವಲ ನಗರ ಪ್ರದೇಶಗಳಿಗಷ್ಟೇ ಅಲ್ಲ ಹಳ್ಳಿಗಳಲ್ಲೂ ಕಂಡು ಬರುತ್ತಿದೆ, ಶ್ರೀಮಂತದಿಂದ ಹಿಡಿದು ಕೂಲಿ ಕಾರ್ಮಿಕರಲ್ಲೂ ಇದು ಕಂಡು ಬರುತ್ತಿದ್ದು ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕು ಆಸ್ಪತ್ರೆಗಳಲ್ಲಿ ಇದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡುವ ಜೀವರಕ್ಷಕ ಚುಚ್ಚುಮದ್ದು ನೀಡಲಾಗುವುದು ಈ ಇಂಜೆಕ್ಷನ್ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸುತ್ತದೆ, 18,000 ರೂಪಾಯಿಗಳ ಈ ಇಂಜೆಕ್ಷನ್ ನೀಡಿದಲ್ಲಿ ಹೃದಯಾಘಾತವಾದ ವ್ಯಕ್ತಿ ಮುಂದಿನ ಮೂರು ಗಂಟೆಯೊಳಗೆ ಚಿಕಿತ್ಸೆ ಪಡೆಯಲು ನೆರವಾಗಲಿದೆ ಎಂದು ಹೇಳಿದರು.
ಈ ಹೃದಯ ಜ್ಯೋತಿ ಯೋಜನೆಗೆ ಚನ್ನಪಟ್ಟಣ ತಾಲೂಕು ಹೊರತಾಗಿದ್ದು, ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಯನ್ನು ಸೇರಿಸುವಂತೆ ಮನವಿ ಮಾಡಿದ ಸಂಸದರು, ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪಿಜಿಷಿಯನ್ ಅವಶ್ಯಕತೆ ಇದೆ, ಅವರನ್ನು ನೇಮಕ ಮಾಡುವಂತೆ ಕೋರಿದರು.ಶಾಸಕರಾದ ಇಕ್ಬಾಲ್ ಹುಸೇನ್ ಅವರು ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಈ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಯೋಗ, ವ್ಯಾಯಾಮದಂತ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಬೇಕು ಹಾಗೂ ಜಿಲ್ಲೆಗೆ ಎಂಆರ್ಐ ಸ್ಕ್ಯಾನಿಂಗ್ ಯಂತ್ರವನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎನ್. ನಟರಾಜ್ ಗಾಣಕಲ್, ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ರಾಜು, ರಾಮನಗರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಚ್.ವಿ. ರಾಜು ಎಂ., ಗೋಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾ, ಉಪಾಧ್ಯಕ್ಷರಾದ ಶಿವಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಹಾಗೂ ಇತರ ಗಣ್ಯರು ವೇದಿಕೆಯಲ್ಲಿದ್ದರು.ವೈದ್ಯಾಧಿಕಾರಿ ರಶ್ಮಿ ಸ್ವಾಗತಿಸಿದರು. ಆಶಾ ಕಾರ್ಯಕರ್ತರು ಸೇರಿದಂತೆ ವೈದ್ಯರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮಸ್ಥರು ಸ್ಥಳದಲ್ಲಿದ್ದರು.