ಮಂಗಳೂರು: ಪತ್ನಿ ಹಾಗೂ ತನ್ನ 4 ವರ್ಷಗ ಮಗುವನ್ನು ಹತ್ಯೆಗೈದ ವ್ಯಕ್ತಿಯೊಬ್ಬ ತಾನೂ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಂಗಳೂರು ಸಮೀಪದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ ಶರಣಾದ ವ್ಯಕ್ತಿಯನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರ್ತಿಸಲಾಗಿದೆ. ಇನ್ನು ಹತ್ಯೆಯಾದವರನ್ನು ಶಿವಮೊಗ್ಗ ಮೂಲದ ಪ್ರಿಯಾಂಕಾ (28), ಗಂಡು ಮಗು ಹೃದಯ (4) ಎಂದು ಗುರ್ತಿಸಲಾಗಿದೆ.
ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್ ಪಕ್ಷಿಕೆರೆ ಮುಖ್ಯ ಜಂಕ್ಷನ್ ನಲ್ಲಿರುವ ಹೋಟೆಲ್ ಅನ್ನು ತನ್ನ ತಂದೆ ತಾಯಿಯೊಂದಿಗೆ ನಡೆಸುತ್ತಿದ್ದರು. ಹತ್ತಿರದ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು.
ನವೆಂಬರ್ 8 ರಂದು ಮಧ್ಯಾಹ್ನ 12:40 ರ ಸುಮಾರಿಗೆ ಕಾರ್ತಿಕ್ ಭಟ್ ಅವರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಟ್ರಾಕ್ ಮಾಸ್ಟರ್ ನವೀನ್ ಅವರು ರೈಲ್ವೇ ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶವ ಬಿದ್ದಿರುವುದನ್ನು ಪತ್ತೆ ಮಾಡಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತದೇಹ ವಿರೂಪಗೊಂಡಿದ್ದರಿಂದ ಗುರುತು ಪತ್ತೆ ಮಾಡುವುದು ಕಷ್ಟವಾಗಿತ್ತು. ಆದರೆ, ಸ್ಥಳ ಪರಿಶೀಲನೆ ವೇಳೆ ಗಾಡಿಯೊಂದರ ಕೀಲಿಕೈ ಪತ್ತೆಯಾಗಿತ್ತು. ಇದೇ ವೇಳೆ ದ್ವಿಚಕ್ರ ವಾಹನವೊಂದನ್ನು ಹಲವು ಗಂಟೆಗಳಾದರೂ ಯಾರೂ ತೆಗೆದುಕೊಂಡು ಹೋಗದೇ ಇರುವುದು ತಿಳಿದುಬಂದಿದೆ.
ಈ ವೇಳೆ ಪೊಲೀಸರು ವಾಹನ ಪರಿಶೀಲಿಸಿದಾಗ ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿದ್ದ ಫೋಟೋ ಮೃತ ವ್ಯಕ್ತಿಯನ್ನು ಹೋಲುವಂತಿರುವುದು ಕಂಡು ಬಂದಿದೆ. ಬಳಿಕ ವಿಳಾಸ ಹಿಡಿದು ಕುಟುಂಬವನ್ನು ಸಂಪರ್ಕಿಸಿದಾಗ ಕುಟುಂಬದಲ್ಲಿ ಕಾರ್ತಿಕ್ ಅವರ ಪತ್ನಿ ಹಾಗೂ ಮಗುವಿನ ಹತ್ಯೆಯಾಗಿರುವುದು ತಿಳಿದುಬಂದಿದೆ.
ಕಾರ್ತಿಕ್ ಅವರು ಶಿವಮೊಗ್ಗ ಮೂಲದ ಪ್ರಿಯಾಂಕ ಅವರನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗಳಿಗೆ ನಾಲ್ಕು ವರ್ಷದ ಮಗುವಿತ್ತು. ಕಾರ್ತಿಕ್ ಅವರು ತಮ್ಮ ಪೋಷಕರೊಂದಿಗೆ ಒಂದೇ ಸೂರಿನಲ್ಲಿ ವಾಸವಿದ್ದರೂ, ಪೋಷಕರು ಹಾಗೂ ಕಾರ್ತಿಕ್ ಕುಟುಂಬ ಎರಡು ರೂಮಿನಲ್ಲಿ ಪ್ರತ್ಯೇಕ ವಾಸವಿತ್ತು. ಕಾರ್ತಿಕ್ ಅವರು ಪೋಷಕರೊಂದಿಗೆ ಹೋಟೆಲ್ ನಡೆಸುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೋಟೆಲ್ ನಿಂದ ಕಾರ್ತಿಕ್ ಪೋಷಕರು ಮನೆಗೆ ವಾಪಸ್ಸಾಗಿದ್ದು, ರೂಮ್ ಬೀಗ ಹಾಕಿರುವುದು ಕಂಡು ಬಂದಿದೆ. ಹೊರಗೆ ಹೋಗಿರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ, ಮರು ದಿನ ಪ್ರಿಯಾಂಕಾ ಫೋನ್ ಸ್ವಿಚ್ ಆಪ್ ಬಂದಿದ್ದು, ಕಾರ್ತಿಕ್ ಕೂಡ ಫೋನ್ ತೆಗೆದಿಲ್ಲ.
ಈ ವೇಳೆ ಅನುಮಾನಗೊಂಡು ರೂಮ್ ಕೊಠಡಿ ತೆಗೆದಾಗ ಪ್ರಿಯಾಂಕಾ ಹಾಗೂ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ, ಸೀಲಿಂಗ್ ಫ್ಯಾನ್ಗೆ ಸೀರೆ ಕಟ್ಟಿರುವುದೂ ಕಂಡು ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಅವರು ಮನೆಯ ಕಿಟಕಿ ಗಾಜಿನ ಚೂರುಗಳಿಂಗ ಹೆಂಡತಿ ಹಾಗೂ ಮಗುವನ್ನು ಹತ್ಯೆ ಮಾಡಿದ್ದು, ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಶಂಕಿಸಲಾಗಿದೆ. ಕಾರ್ತಿಕ್ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ತಾನೇ ಪತ್ನಿ ಹಾಗೂ ಮಗುವನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿರುವುದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಪರಾಧ ತನಿಖಾ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.