ತಿಪಟೂರು: ಮಕ್ಕಳಿಗೆ ಜವಾಬ್ದಾರಿಯುತ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ನಾವು ಮಕ್ಕಳಿಗೆ ನೀಡುವ ಶಿಕ್ಷಣ ಅವರ ಮುಂದಿನ ಜೀವನ ರೂಪಿಸುವ ಮಾರ್ಗವಾಗುತ್ತದೆ ಎಂದು ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ತಾಲ್ಲೋಕಿನ ಹೊನ್ನವಳ್ಳಿ ಹೋಬಳಿಯ ಹೆಚ್. ಮುದ್ದೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಕರುಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸೋಮಶೇಖರ್, ಮಕ್ಕಳು ಶಾಲೆಯ ಒಳಗಡೆ ಕಲಿಯುವ ಶಿಕ್ಷಣದಷ್ಟೆ ಮಹತ್ವವನ್ನ ದೈಹಿಕ ಚಟುವಟಿಕೆಗಳಿಗೂ ನೀಡಿ, ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ತಕ್ಕಂತೆ ವೇದಿಕೆ ನೀಡಿದರೆ, ಸಮಾಜದ ಆಸಕ್ತಿಯಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಉನ್ನತ ಮಟ್ಟದ ವಿದ್ಯಾಭ್ಯಾಸ ಮತ್ತು ಪದವಿಗೆ ಏರಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕು. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಮಾರ್ಗ ಒಂದೇ ಅದುವೇ ಸರ್ಕಾರಿ ಶಾಲೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಉಮಾ ಮಹೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ಮೌಲ್ಯಧಾರಿತವಾಗಿ ದೊರೆಯುತ್ತಿದೆ. ವಿದ್ಯಾರ್ಥಿಗಳು ಗುರು- ಹಿರಿಯರಿಗೆ ಮತ್ತು ಪೋಷಕರಿಗೆ ಗೌರವ ನೀಡಿದ್ದೆ ಆದಲ್ಲಿ, ಮುಂದೆ ಆ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾನೆ. ಗ್ರಾಮೀಣ ಪ್ರದೇಶದ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿ ಊರಿಗೆ ಕೀರ್ತಿ ತರಬೇಕೆಂದು ಎಂದು ತಿಳಿಸಿದರು.
ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿಯರಾದ ಪ್ರೇಮಲತಾ ಮತ್ತು ಅನಿತಾ ಕುಮಾರಿ ರವರಿಗೆ ಬೀಳ್ಕೊಡುಗೆ ನೀಡಲಾಯಿತು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನೋಟ್ ಬುಕ್, ಲೇಖನ ಸಾಮಗ್ರಿ ಹಾಗೂ ಪರಿಕರಗಳನ್ನು ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗರಾಜ್, ಉಪಾಧ್ಯಕ್ಷ ಗಂಗಾಧರ್, ಗ್ರಾಪಂ ಸದಸ್ಯೆ ರೇಖಾ, ಹಾಲ್ಕುರಿಕೆ ನವೀನ್ ಕುಮಾರ್, ಪಿಎಸಿಬಿಎನ್ ಉಪಾಧ್ಯಕ್ಷ ಮೋಹನ್ ನಾಯ್ಕ, ಶಾಲಾ ಮುಖ್ಯ ಶಿಕ್ಷಕ ಕಾಂತರಾಜ್, ಸಹ ಶಿಕ್ಷಕಿ ಅರುಣ್ ಕುಮಾರಿ, ಗ್ರಾಮದ ರೇವಣಸಿದ್ದಯ್ಯ, ಕುಮಾರಸ್ವಾಮಿ ಮತ್ತು ಗಂಗಾಧರಯ್ಯ ಸೇರಿದಂತೆ ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.