ಹೆಣ್ಣು ಮಕ್ಕಳನ್ನು ಎಲ್ಲಿ ಗೌರವಿಸಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣುಮಗಳ ಸ್ಥಾನಮಾನವನ್ನು ಸೂಚಿಸುತ್ತದೆ. ಆದ್ದರಿಂದ ಹೆಣ್ಣಿಗೆ ಸಲ್ಲಬೇಕಾದ ಸ್ವಾತಂತ್ರ್ಯ ಮತ್ತು ಗೌರವಗಳನ್ನು ನೀಡಬೇಕು. ಈಗಿನ ಡಿಜಿಟಲ್ ಯುಗದಲ್ಲಿಯೂ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ.ಗಂಡು ಮತ್ತು ಹೆಣ್ಣು ಸಮಾನರು ಇಲ್ಲಿ ಯಾರು ಹೆಚ್ಚಲ್ಲ ಕಡಿಮೆಯೂ ಅಲ್ಲ ಹೆಣ್ಣಾಗಿ ಹುಟ್ಟಿದವಳಿಗೆ ಸಮಾಜದಲ್ಲಿ ಸಮಾನತೆ ಮತ್ತು ಪ್ರೀತಿ ಸಮ ಪ್ರಮಾಣದಲ್ಲಿ ಸಲ್ಲಬೇಕಾಗಿದೆ.
ಹೆಣ್ಣನ್ನು ಶಕ್ತಿ ಜನನಿ ಮೂಲ ಸ್ವರೂಪಿಣಿ ಹೀಗೆ ಬಗೆ ಬಗೆಯಾಗಿ ವರ್ಣಿಸಿದರು ಹೆಣ್ಣು ಮಗುವೊಂದು ಜನಿಸಿದಾಗ”ಅಯ್ಯೋ ಹೆಣ್ಣು ಮಗುವ”ಎಂಬ ರಾಗವನ್ನು ಎಳೆಯುವುದು ನಮ್ಮ ಸಮಾಜ ಇನ್ನೂ ಬಿಟ್ಟಿಲ್ಲ. ಈ ಮನಸ್ಥಿತಿಗೆ ಕಾರಣ ಹೆಣ್ಣು ಒಂದು ಹೊರೆ, ಹೇಗಿದ್ದರೂ ಗಂಡನ ಮನೆಗೆ ಹೋಗುವವಳು ಹೆಣ್ಣು ಮಕ್ಕಳಿಂದ ಖರ್ಚು ಜಾಸ್ತಿ ಹೀಗೆ ಹಲವಾರು ಪೂರ್ವಾ ಗ್ರಹಗಳು,ನಮ್ಮದೇ ಸಮಾಜದ ಹಿಂದಿನ ಕಾಲದ ಕಟ್ಟುಪಾಡುಗಳು ವ್ಯವಸ್ಥೆಗಳು ಹಾಗೂ ಅಂಕುಡೊಂಕುಗಳು ಕಾರಣವಾಗಿವೆ.ಹೆಣ್ಣು ಮಗುವಿನ ಜನನವಾದೊಡನೆ ಸಂಭ್ರಮದ ವಾತಾವರಣ ಸೃಷ್ಟಿಯಾಗಬೇಕೆಂದು ಪ್ರತಿಯೊಂದು ತಾಯಿಯೂ ಬಯಸುತ್ತಾಳೆ.
ಅದಲ್ಲದೆ ಹೆಣ್ಣಿಗೆ ಬಾಳ ಸಂಗಾತಿಯ ಆಯ್ಕೆ ವಿಷಯದಲ್ಲೂ ಅವಳ ಅಭಿಪ್ರಾಯವನ್ನು ಹಲವು ಬಾರಿ ಪರಿಗಣಿಸುವುದಿಲ್ಲ. ಹೆಣ್ಣು ವಿದ್ಯಾವಂತಳಾಗಿ ಉತ್ತಮವಾಗಿ ತೇರ್ಗಡೆಯಾಗಿದ್ದರೂ ಅವಳು ಉದ್ಯೋಗಕ್ಕೆ ಹೋಗುವುದೋ ಬೇಡವೋ ಎಂಬ ನಿರ್ಧಾರ ಬಹಳ ಸಲ ಆಕೆಯ ಪತಿ ಮತ್ತು ಮನೆಯವರ ಮೇಲೆ ಅವಲಂಬಿತವಾಗಿರುತ್ತದೆ.ಆದರೆ ಈ ಪರಿಸ್ಥಿತಿ ಬದಲಾಗಬೇಕು ಪ್ರತಿಯೊಂದು ಹೆಣ್ಣಿಗೆ ಅವಳಿಗೆ ಸಿಗಬೇಕಾದ ಸ್ಥಾನಮಾನ ಮೂಲಭೂತ ಸ್ವಾತಂತ್ರ್ಯ ಹಾಗೂ ಅಭಿಪ್ರಾಯಕ್ಕೆ ಮನ್ನಣೆ ನೀಡುವ ವಾತಾವರಣ ಸೃಷ್ಟಿ ಆಗಬೇಕಾಗಿದೆ.
ಹೆಣ್ಣು ಮಕ್ಕಳು ಮನೆ ಮತ್ತು ಮನೆಯ ಹೊರಗೂ ಗಂಡಿಗಿಂತ ಮಿಗಿಲಾಗಿ ದುಡಿದರೂ ,ಸೈಕಲ್ ನಿಂದ ಹಿಡಿದು ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಮುಗಿಸಿ ಬಂದರೂ ಹೆಣ್ಣು ಮಕ್ಕಳ ಕಡೆಗಿನ ತಾರತಮ್ಯ ಅಸಡ್ಡೆ ಕಡಿಮೆಯಾಗಿಲ್ಲ.ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪ್ರತಿಯೊಂದು ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು.ಹೆಣ್ಣು ಬ್ರೂಣ ಹತ್ಯೆ, ದೇವದಾಸಿ ಪದ್ಧತಿ,ವೇಶ್ಯಾವಾಟಿಕೆ,ಬಾಲ್ಯವಿವಾಹ,ಬಾಲಕಾರ್ಮಿಕ ಪದ್ಧತಿ, ಲೈಂಗಿಕಶೋಷಣೆ ಮತ್ತು ಇನ್ನಿತರ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳು ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ.
ಸಮಾಜದಲ್ಲಿ ಶಾಂತಿ ಹಾಗೂ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಸುಭದ್ರತೆಯ ಭಾವನೆಯ ಮೂಡಬೇಕಾಗಿದೆ.ಇವೆ ವಾತಾವರಣ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಿಸಬೇಕಾಗಿದೆ.ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಿತರಾಗಿ ಸಾಮಾಜಿಕ ಆರ್ಥಿಕ ರಾಜಕೀಯ ವಿಷಯಗಳಲ್ಲಿ ತಮ್ಮ ಯೋಗದಾನ ನೀಡುವಂತಹ ಮುಕ್ತ ವಾತಾವರಣ ಸೃಷ್ಟಿಯಾಗಬೇಕಾಗಿದೆ.ಕುಟುಂಬದಲ್ಲೂ ಹಿರಿಯರು ಪತಿ ಮಕ್ಕಳು ಆಕೆಯನ್ನು ಪ್ರೀತಿಸುವ ಅವಳ ಅಭಿಪ್ರಾಯಗಳಿಗೆ ಗೌರವ ಕೊಡುವ ವಾತಾವರಣವನ್ನು ನೀಡಬೇಕು ಎಂದಿಗೂ ಕೌಟುಂಬಿಕ ದೌರ್ಜನ್ಯ ಸಲ್ಲದು. ಮನೆಯಲ್ಲಿ ನೆಮ್ಮದಿ ಇದ್ದರೆ ಆಕೆಯೂ ಇನ್ನೂ ಸಮರ್ಥವಾಗಿ ಸಮಾಜದಲ್ಲಿ ತನ್ನ ಯೋಗದಾನ ನೀಡಬಲ್ಲಳು.ಮನೆಯವರ ಸಹಕಾರ ಪ್ರೀತಿ ನೆಮ್ಮದಿಯ ವಾತಾವರಣ ಅಗತ್ಯವಾಗಿ ಸೃಷ್ಟಿಯಾಗಬೇಕಾಗಿದೆ.
ಹೆಣ್ಣು ಮಕ್ಕಳು ಹಲವು ಕೆಲಸಗಳನ್ನು ಒಟ್ಟಿಗೆ ನಿಭಾಯಿಸಬಲ್ಲಹ ಸಾಮರ್ಥ್ಯ ಉಳ್ಳವರು.ಮನೆ ಮತ್ತು ಕಚೇರಿಯಲ್ಲೂ ದಕ್ಷವಾಗಿ ತಮ್ಮ ಹುದ್ದೆಗಳನ್ನು ನಿಭಾಯಿಸಬಲ್ಲರಾಗಿರುತ್ತಾರೆ.ಅವರು ಮುಕ್ತವಾಗಿ ಸಲಹೆ ನೀಡುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ವಾತಾವರಣ ಕಚೇರಿಗಳಲ್ಲೂ ಸೃಷ್ಟಿಯಾಗಬೇಕು.ಈಗಂತೂ ಹೆಣ್ಣು ಮಕ್ಕಳು ಎಲ್ಲ ರಂಗದಲ್ಲೂ ತನ್ನ ಛಾಪನ್ನು ಊರುವಲ್ಲಿ ಯಶಸ್ವಿಯಾಗಿದ್ದಾರೆ.ರಾಜಕೀಯ ರಂಗದಿಂದ ಹಿಡಿದು ಐಟಿ ಕಂಪನಿಗಳ ಸಿಇಒಗಳಾಗಿ ಗಗನಯಾನವನ್ನು ನಿಭಾಯಿಸುವ ವಿಜ್ಞಾನಿಗಳಾಗಿಯೂ ಎಲ್ಲಾ ಕ್ಷೇತ್ರದಲ್ಲೂ ಗಂಡಿಗೆ ಸರಿಸಮನಾಗಿ ಸಾಧಿಸುತ್ತಿದ್ದಾರೆ.ಆದರೆ ಪೂರಕ ವಾತಾವರಣವಿಲ್ಲದೆ ಅನವಶ್ಯ ಒತ್ತಡ ಹೆಚ್ಚಾದಾಗ ಅವರ ಯೋಗದಾನಕ್ಕೆ ಸವಾಲಾಗುತ್ತದೆ.ಈ ಒತ್ತಡ ಪರಿಸ್ಥಿತಿ ತರುವ ದಣಿವು ಮಾನಸಿಕ ಹಿಂಸೆ ಮುಂತಾದ ಪರಿಣಾಮಗಳನ್ನು ಅನುಭವಿಸಿ ಹೇಳಲು ಆಗದೆ ಬಿಡಲು ಆಗದ ಪರಿಸ್ಥಿತಿಯ ಸವಾಲು ಬಹಳ ಹೆಣ್ಣು ಮಕ್ಕಳಿಗೆ ಇದೆ.
ಒಟ್ಟಾರೆ ತಮ್ಮ ಸುರಕ್ಷತೆ ಮಾನಸಿಕ ಭದ್ರತೆ ತಾರತಮ್ಯಗಳ ನಿವಾರಣೆ ಹತ್ತಿರದವರ ಪ್ರೀತಿಸಹಕಾರ ಹಾಗೂ ತಮ್ಮ ಸಾಮರ್ಥ್ಯ ಹಾಗು ಯೋಗದಾನ ಸಲ್ಲಿಸಿದಾಗ ಒಂದೊಳ್ಳೆಯ ಮಾತುಗಳು ಪೂರಕ ಪುರಸ್ಕಾರಗಳು ಆಕೆಯ ಮನೋಸ್ಥೈರ್ಯವನ್ನು ಹೆಚ್ಚಿಸುತ್ತವೆ.ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಹೆಚ್ಚಾಗುತ್ತದೆ.ಹೆಣ್ಣುಮಕ್ಕಳು ಎಲ್ಲರಂಗದಲ್ಲೂ ಮುಂದೆ ಬರುತ್ತಿರುವುದರಿಂದಲೇ ದೇಶದ ಪ್ರಗತಿ ಸಾಧ್ಯವಾಗುತ್ತಿದೆ.ಮೊನ್ನೆ ನಡೆದ 75 ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಸೈನ್ಯದ ಮೂರು ವಿಭಾಗಗಳಿಂದ ಹೆಣ್ಣು ಮಕ್ಕಳೇ ಭಾಗವಹಿಸಿ ಹಲವಾರು ಆಕರ್ಷಕ ಕವಾಯತುಗಳನ್ನು ಮೆರೆದು ಪೆರೇಡಿಗೆ ರಂಗು ತಂದಿತ್ತರು.ಇತಿಹಾಸದಿಂದಲೂ ಹೆಣ್ಣು ಮಕ್ಕಳ ಪಾತ್ರ ಎಲ್ಲಾ ರಂಗದ ಪ್ರಗತಿಯಲ್ಲಿ ನಿರ್ಣಾಯಕವೆನಿಸಿದೆ.ಈ ನಿರ್ಣಾಯಕ ಪಾತ್ರಧಾರಿಗಳ ಸುಭದ್ರತೆಗೆ ಹಾಗೂ ಅವರು ಇನ್ನೂ ಹೆಚ್ಚು ಯೋಗದಾನ ಸಲ್ಲಿಸುವಂತಹ ವಾತಾವರಣ ಸೃಷ್ಟಿಸುವ ಕರ್ತವ್ಯದ ನಿಲುವು ಸಮಾಜದ್ದಾಗಲಿ.