ಬೆಳಗಾವಿ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಂದ ಮಾಹಿತಿ ಪಡೆದರು. ಲಾಠಿ ಚಾರ್ಜ್ ಕುರಿತು ಸಂಪೂರ್ಣ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ನೀವು ಮಾಡಿದ್ದು ಸರಿ ಇದೆ ಎಂದರು.
ಲಾಠಿಚಾರ್ಜ್ ಮತ್ತು ಪ್ರತಿಭಟನೆ ಕುರಿತು ಡಿಸಿ ಮೊಹಮ್ಮದ್ ರೋಷನ್ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಗಲಾಟೆಯ ಸಂಪೂರ್ಣ ವಿಡಿಯೋ ವೀಕ್ಷಣೆ ಮಾಡಿದರು. ಪ್ರತಿಭಟನೆ ವೇಳೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆದೇಶ ಪ್ರತಿ ಸಮೇತ ಸಿದ್ದರಾಮಯ್ಯಗೆ ವಿವರಣೆ ನೀಡಲಾಯಿತು.
ಹೈಕೋರ್ಟ್ ಹೋರಾಟಕ್ಕೆ ಅನುಮತಿ ನೀಡಿತ್ತು. ಆದರೆ, ಆ ಜಾಗ ಬಿಟ್ಟು ಬೇರೆ ಕಡೆ ಹೋಗದಂತೆ, ಶಾಂತಿಯುತ ಪ್ರತಿಭಟನೆ ಮಾಡುವಂತೆ ಆದೇಶ ಇತ್ತು. ಹೈಕೋರ್ಟ್ ಆದೇಶ ಪಾಲನೆ ಮಾಡಲು ಲಾಠಿ ಚಾರ್ಜ್ ಮಾಡಿದ್ದೇವೆ ಎಂದು ಸಿಎಂ ಅವರ ಮುಂದೆ ಅಧಿಕಾರಿಗಳು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈಕೋರ್ಟ್ ಆದೇಶ ಪಾಲನೆ ಮಾಡಿದ್ದು ಒಳ್ಳೆಯದು ಎಂದರು. ನಂತರ ಅಧಿಕಾರಿಗಳು ನೀಡಿದ ವಿಡಿಯೋ ಹಾಗೂ ಹೈಕೋರ್ಟ್ ಆದೇಶದ ಪ್ರತಿ ತೆಗೆದುಕೊಂಡು ಹೋದರು.