ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ನಡುವಿನ ಮಾತಿನ ಸಮರ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಲು ಮುಂದಾಗಿದ್ದಾರೆ.ಪಕ್ಷಕ್ಕೆ ನಾನು ಬೇಡವಾದ್ರೆ, ಪಕ್ಷ ಬಿಡಲು ಸಿದ್ಧ ಎಂದಿದ್ದ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದರು. ಈ ಮಧ್ಯೆ ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿ ರಾಮುಲು ಅವರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ.
ರಾಮುಲು ಪಕ್ಷ ಬಿಡದಂತೆ ಸೂಚಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿನ್ನೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಬಿ.ಶ್ರೀರಾಮುಲು ಆಪ್ತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.ಮುಂದಿನ ವಾರ ದೆಹಲಿಗೆ ಬನ್ನಿ. ಇಲ್ಲಿ ಮಾತನ್ನಾಡೋಣ. ನಿಮ್ಮ ಹಾಗೂ ರೆಡ್ಡಿ ನಡುವೆ ಇರುವ ಭಿನ್ನಾಭಿಪ್ರಾಯವನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಿ ಹಾದಿ ಬೀದಿ ರಂಪಾಟ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 35-40 ವರ್ಷದಿಂದ ನೀವಿಬ್ಬರು ಒಟ್ಟೊಟ್ಟಿಗೆ ಬೆಳೆದಿದ್ದೀರಿ. ಈಗ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ, ನಾನೊಂದು ತೀರಾ, ನೀನೊಂದು ತೀರಾ ಎಂಬಂತಾಗುವುದು ಬೇಡ. ನಿಮ್ಮಿಬ್ಬರ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು ರಾಜ್ಯದಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ. ಇನ್ನೆರಡು ದಿನದೊಳಗೆ ಈ ಗದ್ದಲಕ್ಕೆ ತೆರೆ ಬೀಳಬೇಕು. ಮುಂದಿನ ವಾರ ನೀವು ದೆಹಲಿಗೆ ಬನ್ನಿ. ಇಲ್ಲಿ ಕುಳಿತು ಮಾತನ್ನಾಡೋಣ ಎಂದು ಜೆ.ಪಿ.ನಡ್ಡಾರ ಕಚೇರಿಯಿಂದ ರಾಮುಲುಗೆ ಕರೆ ಬಂದಿದೆ ಎಂದು ಹೇಳಲಾಗಿದೆ.