ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಸಿ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಸಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈಗಾಗಲೇ ಸಿನಿಮಾದ ಟೀಸರ್ ಮತ್ತು ಗೀತೆಯೊಂದನ್ನು ಹೊರತಂದಿದ್ದು, ಇದೀಗ ಸಿನಿಮಾದಲ್ಲಿ ಬರುವ ಮತ್ತೊಂದು ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.
ಸಿ ಸಿನಿಮಾದಲ್ಲಿ ಬರುವ ಎ ಅಲ್ಲ.. ಬಿ ಅಲ್ಲ ಸಿ ಎಂಬ ಹಾಡಿನ ಲಿರಿಕಲ್ ವಿಡಿಯೋವನ್ನು ಇತ್ತೀಚೆಗೆ ನಟ ಲೂಸ್ ಮಾದ ಯೋಗಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಎ.ಬಿ. ಮುರಳೀಧರನ್ ಸಂಗೀತ ಸಂಯೋಜನೆ, ಶಶಾಂಕ್ ಶೇಷಗಿರಿ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.
ಕೆಲ ದಿನಗಳ ಹಿಂದಷ್ಟೇ ಸಿ ಸಿನಿಮಾದ ತಂದೆ-ಮಗಳ ಬಾಂಧವ್ಯದ ಕಂದಾ ಕಂದಾ ಎಂಬ ಸಾಲಿನಿಂದ ಪ್ರಾರಂಭವಾಗುವ ಈ ಗೀತೆಯನ್ನು ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದರು. ವಾಸುಕಿ ವೈಭವ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಮತ್ತೊಂದು ಗೀತೆ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ.
ಯುವ ಪ್ರತಿಭೆ ಕಿರಣ್ ಸುಬ್ರಮಣಿ ಸಿ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ನಾಯಕ ನಟನಾಗಿ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. `ಸಿ’ ಸಿನಿಮಾ ತಂದೆ-ಮಗಳ ಬಾಂಧವ್ಯದ ಸುತ್ತ ನಡೆಯುವ ಕಥಾಹಂದರನ್ನು ಹೊಂದಿದ್ದು, ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.
ಎಜಿಎಸ್ ಪ್ರೊಡಕ್ಷನ್ ಬ್ಯಾನರಿನಲ್ಲಿ ಸುಬ್ರಮಣಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರತಂಡ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ.