ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್, ” ಗನ್ಸ್ ಅಂಡ್ ರೋಸಸ್” ಚಿತ್ರದಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇವರ ನಟನೆಯ ಮೊದಲ ಚಿತ್ರ ಇದ್ದಾಗಿದ್ದು, 2025 ರ ಜನವರಿ 3, ಹೊಸವರ್ಷದ ಮೊದಲಚಿತ್ರವಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೆಚ್ ಆರ್ ನಟರಾಜ್ ಅವರುದ್ರೋಣ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು,
ಶ್ರೀನಿವಾಸ್ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಹೆಚ್ ಆರ್ ನಟರಾಜ್, ನಾನು ಮೂಲತಃ ಚಿತ್ರರಂಗದವನಲ್ಲ. ನಿಮಗೆ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಬಿಲ್ಡರ್ ಕೂಡ. ನಾನು ನಂಬಿರುವ ಶ್ಯಾಮ್ ಶಂಕರ್ ಭಟ್ ಗುರುಗಳು ನನಗೆ ಸಿನಿಮಾ ಮಾಡಲು ಆದೇಶಿಸಿದರು. ಅವರ ಮಾತಿನಂತೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ.
ಈ ಚಿತ್ರದ ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ಹೇಳಿ, ನಾಯಕ ಅರ್ಜುನ್ ಫೋಟೊ ತೋರಿಸಿದ್ದರು. ಈ ಹುಡುಗನನ್ನು ನಾಯಕನನ್ನಾಗಿ ಹಾಕಿಕೊಳ್ಳೋಣ ಎಂದರು. ನಾನು ನನ್ನ ಗುರುಗಳನ್ನು ಕೇಳಿದ್ದೆ. ಅವರು ಈ ಹುಡುಗನ್ನೆ ನಾಯಕನಾಗಲಿ ಎಂದು ಹೇಳಿದರು. ನಂತರ ಚಿತ್ರ ಆರಂಭವಾಯಿತು. ಈಗ ಬಿಡುಗಡೆ ಹತ್ತಿರ ಬಂದು ನಿಂತಿದೆ. ಜನವರಿ ಮೂರು ನಮ್ಮ ಚಿತ್ರ ಗೋಕುಲ್ ಫಿಲಂಸ್ ಮೂಲಕ ಬಿಡುಗಡೆಯಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಇಪ್ಪತ್ತೈದು ವರ್ಷಗಳಿಂದ ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯಶ್ವಿಕ ನಿಷ್ಕಲ ಈ ಚಿತ್ರದ ನಾಯಕಿ. ಕಿಶೋರ್, ಅವಿನಾಶ್, ಶೋಭ್ ರಾಜ್, ನೀನಾಸಂ ಅಶ್ವಥ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶಶಿಕುಮಾರ್ ಸಂಗೀತ ನೀಡಿದ್ದಾರೆ. ಜನಾರ್ದನ್ ಬಾಬು ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶರತ್ ಬರೆದಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಕುಮಾರ್ ತಿಳಿಸಿದರು.
“ನಂದ ಲವ್ಸ್ ನಂದಿತಾ” ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದ ನನಗೆ, ನಾಯಕನಾಗಿ ಇದು ಚೊಚ್ಚಲ ಚಿತ್ರ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ಆನಂತರ ನಟಿಸಿದ್ದೇನೆ ಹಿರಿಯ ತಂತ್ರಜ್ಞರು ಹಾಗೂ ಕಲಾವಿದರಿಂದ ಸಾಕಷ್ಟು ಕಲಿತಿದ್ದೀನಿ. ವಿಶೇಷವಾಗಿ ಥ್ರಿಲ್ಲರ್ ಮಂಜು ಅವರು. ಆಕ್ಷನ್ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದರೆ ಅದಕ್ಕೆ ಅವರೆ ಕಾರಣ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು ನಾಯಕ ಅರ್ಜುನ್.
ಇದೊಂದು ಭೂಗತ ಜಗತ್ತಿನಲ್ಲಿ ಅರಳಿದ ಪ್ರೇಮಕಥೆ. ಹಾಗಾಗಿ ಚಿತ್ರಕ್ಕೆ “ಗನ್ಸ್ ಅಂಡ್ ರೋಸಸ್” ಎಂದು ಹೆಸರಿಡಲಾಗಿದೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಮುಂತಾದ ವಿಷಯಗಳನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಅಜಯ್ ಕುಮಾರ್ ಅವರು ನನ್ನ ಗುರುಗಳು. ಗುರುಗಳ ಮಗನ ಮೊದಲ ಚಿತ್ರಕ್ಕೆ ಕಥೆ ಬರೆದಿದ್ದು ನನ್ನ ಭಾಗ್ಯ ಎಂದು ಕಥೆಗಾರ ಶರತ್ ತಿಳಿಸಿದರು.
ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷಗಳಾಯಿತು. ಈಗ ನನ್ನ ಮಗ ನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾನೆ. ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಅವನಿಗರಲಿ ಎಂದರು ಅಜಯ್ ಕುಮಾರ್.ನಾಯಕಿ ಯಶ್ವಿಕ ನಿಷ್ಕಲ, ಚಿತ್ರದಲ್ಲಿ ನಟಿಸಿರುವ ನೀನಾಸಂ ಅಶ್ವಥ್, ಜೀವನ್ ರಿಚಿ, ಸಂಗೀತ ನಿರ್ದೇಶಕ ಶಶಿಕುಮಾರ್, ಛಾಯಾಗ್ರಾಹಕ ಜನಾರ್ದನ್ ಬಾಬು ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಎಂಭತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ವಿತರಕ ಗೋಕುಲ್ ರಾಜ್ ತಿಳಿಸಿದರು. .