ಕನ್ನಡದಲ್ಲಿ ಈಗಾಗಲೇ ಅಮೃತ್ ಅಪಾರ್ಟ್ಮೆಂಟ್ ಮತ್ತು ದ ಜಡ್ಜ್ ಮೆಂಟ್ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಸದ್ದಿಲ್ಲದೆ ಹೊಸ ಸಿನೆಮಾಕ್ಕೆ ತಯಾರಿ ನಡೆಸಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಕಥಾಹಂದರ ಈಗಾಗಲೇ ಪೂರ್ಣಗೊಂಡಿದ್ದು, ಈ ಸಿನೆಮಾಕ್ಕೆ ಹಿಂದಿಯ ಲಾಪತ ಲೇಡಿಸ್ ಖ್ಯಾತಿಯ ಸೋನು ಆನಂದ್ ಬರಹಗಾರರಾಗಿ ಎಂಟ್ರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಹಿಂದಿಯ ಲಾಪತ ಲೇಡಿಸ್ ಸಿನೆಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನವಾಗಿದೆ. ಆಮೀರ್ ಖಾನ್ ಪ್ರೊಡಕ್ಷನ್ ನಿರ್ಮಾಣದ ಈ ಸಿನೆಮಾಕ್ಕೆ ಬರಹಗಾರನಾಗಿರುವ ಸೋನು ಆನಂದ್, ಇದೀಗ ಕನ್ನಡದ ಮೂಲಕ ಬಹುಭಾಷೆಗಳಿಗೆ ಹೋಗುತ್ತಿರುವ ಸಿನೆಮಾಕ್ಕೂ ಬರಹಗಾರನಾಗಿ ತೊಡಗಿಸಿಕೊಂಡಿರುವುದು ವಿಶೇಷ.
ಇನ್ನೂ ಹೆಸರಿಡ ಈ ಬಗ್ಗೆ ಮಾಗ್ಗೆ ಮಾತನಾಡುವ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ), ಈಗಾಗಲೇ ಐದಾರು ಸಿನೆಮಾಗಳನ್ನು ನಿರ್ಮಿಸಿ, ಎರಡು ಸಿನೆಮಾಗಳನ್ನು ನಿರ್ದೇಶಿಸಿರುವ ನಾನು ಮುಂದೆ ಯಾವ ಥರದ ಸಿನೆಮಾಗಳನ್ನು ಮಾಡಬೇಕು ತಿಳಿಯಲು ಆಡಿಯನ್ಸ್ ಸರ್ವೇ ಮಾಡಿದ್ದೆ. ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ನಡೆದ ಈ ಸರ್ವೇಯಲ್ಲಿ ಸುಮಾರು 65% ಕ್ಕೂ ಅಧಿಕ ಸಂಖ್ಯೆಯ ಆಡಿಯನ್ಸ್ ತಮಗೆ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ ಶೈಲಿಯ ಸಿನೆಮಾಗಳು ಇಷ್ಟವಾಗಿದ್ದು, ಅಂಥದ್ದೇ ಸಿನೆಮಾಗಳನ್ನು ಮಾಡುವಂತೆ, ತಮ್ಮ ಅನಿಸಿಕೆ-ಅಭಿಪ್ರಾಯ ಹಂಚಿಕೊಂಡಿರುತ್ತಾರೆ.
ಹೀಗಾಗಿ, ನಮ್ಮ ಮುಂದಿನ ಸಿನೆಮಾವನ್ನು ಪ್ರೇಕ್ಷಕರ ಆಸಕ್ತಿ ಮತ್ತು ಹಕ್ಕೊತ್ತಾಯದಂತೆ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ ಶೈಲಿಯಲ್ಲೇ ಮಾಡಲು ಮುಂದಾಗಿದ್ದೇವೆ? ಎನ್ನುತ್ತಾರೆ.ಸದ್ಯ ಈ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ದೀಪಾವಳಿ ಹಬ್ಬದ ವೇಳೆಗೆ ಈ ಸಿನೆಮಾದ ಮುಹೂರ್ತ ನಡೆಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಈ ಸಿನೆಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಯ ಹಲವು ಜನಪ್ರಿಯ ಕಲಾವಿದರು ಈ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.