ಪ್ಯಾರಿಸ್: ಆಧುನಿಕ ಒಲಿಂಪಿಕ್ಸ್ ಆರಂಭವಾಗಿ ೫೬ ವರ್ಷಗಳ ನಂತರ ಭಾರತವು ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಜಯಿಸಿತ್ತು. ಆಗ ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ಕಶಾಬಾ ಜಾಧವ್ ಅವರು ಕಂಚಿನ ಪದಕ ಜಯಿಸಿದ್ದರು. ಅದಾದ ನಂತರ ವೈಯಕ್ತಿಕ ವಿಭಾಗದಲ್ಲಿ ಮತ್ತೊಂದು ಪದಕ ಜಯಿಸಲು ೪೪ ವರ್ಷಗಳವರೆಗೆ ಕಾಯಬೇಕಾಯಿತು. ಟೆನಿಸ್ನಲ್ಲಿ ಲಿಯಾಂಡರ್ ಪೇಸ್ ೧೯೯೬ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದುಕೊಟ್ಟರು.
ಆದರೆ ಭಾರತದ ಮಹಿಳೆಯೊಬ್ಬರು ಒಲಿಂಪಿಕ್ ಕೂಟದಲ್ಲಿ ಪದಕ ಜಯಿಸುವುದನ್ನು ನೋಡಲು ೨೦೦೦ನೇ ಇಸವಿಯವರೆಗೂ ಕಾಯಬೇಕಾಯಿತು. ಸಿಡ್ನಿ ಒಲಿಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ವೇಟ್ಲಿಫ್ಟಿಂಗ್ನಲ್ಲಿ ಕಂಚು ಗೆದ್ದರು. ಇದೆಲ್ಲದರಾಚೆ ಭಾರತದ ಸ್ವಾತಂತ್ರ್ಯ ನಂತರದ ಒಲಿಂಪಿಕ್ ಕೂಟಗಳಲ್ಲಿ ಮಹಿಳೆ ಅಥವಾ ಪುರುಷರ ವೈಯಕ್ತಿಕ ವಿಭಾಗದಲ್ಲಿ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ ಭಾರತೀಯರು ಯಾರೂ ಇರಲಿಲ್ಲ. ಇದೀಗ ಪ್ಯಾರಿಸ್ನಲ್ಲಿ ಶೂಟರ್ ಮನು ಭಾಕರ್ ಈ ಸಾಧನೆ ಮಾಡಿದ್ದಾರೆ.
ಪ್ಯಾರಿಸ್ನಿಂದ ೨೮೦ ಕಿ.ಮೀ ದೂರದಲ್ಲಿರುವ ಶತೋಹು ಶೂಟಿಂಗ್ ರೇಂಜ್ನಲ್ಲಿ ನಡೆದ ೧೦ ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಮನು ಅವರು ಸರಬ್ಜೋತ್ ಸಿಂಗ್ ಜೊತೆಗೂಡಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದರು. ಇದರೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಭಾನುವಾರ ಇದೇ ರೇಂಜ್ನಲ್ಲಿ ಅವರು ಮಹಿಳೆಯರ ವಿಭಾಗದ ೧೦ ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗಳಿಸಿದ್ದರು. ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಪದಕ ಗದ್ದ ಭಾರತದ ಮೊಟ್ಟಮೊದಲ ಮಹಿಳೆಯಾಗಿದ್ದರು. ಇದೀಗ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಜಯಿಸಿದ ಮೊದಲ ಭಾರತೀಯ ಕ್ರೀಡಾಪಟುವಾದರು.