ನೂತನ ಆಂಗ್ಲ ಸಂವತ್ಸರ ಆರಂಭದ ದಿನವಾದ ಬುಧವಾರದಂದು ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸೇವಾ ನಿರತ ಸಿಬ್ಬಂದಿ ಮಾದರಿ ಆಗುವಂತಹ ಕಾರ್ಯ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ.
ನಗರದ ಮೆಜೆಸ್ಟಿಕ್ ನ ಗೂಡ್ಶೆಡ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಸ್ವಯಂ ಸೇವಾ ಸಂಸ್ಥೆ ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ (ಐಸಿಡಿಎಸ್ಎಸ್) ಸಹಯೋಗದೊಂದಿಗೆ 24/7 ವಸತಿ ಕೇಂದ್ರವನ್ನು ನಿರ್ವಹಿಸಲಾಗುತ್ತಿದ್ದು, ಇಲ್ಲಿ ನಾನಾ ಕಾರಣದಿಂದ ತಮ್ಮ ಕುಟುಂಬದವರಿಂದ ಬೇರ್ಪಟ್ಟು, ದಿಕ್ಕು ದೆಸೆ ಇಲ್ಲವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ಪುಟ್ ಪಾತ್ಗಳಲ್ಲಿ ಅನಿಶ್ಚಿತತೆಯಿಂದ ಪರಿತಪಿಸುವ ನೊಂದ ಜೀವಗಳನ್ನು ಐಸಿಡಿಎಸ್ಎಸ್ ನ ಸ್ವಯಂ ಸೇವಕರು ಗುರುತಿಸಿ, ಈ ಕೇಂದ್ರಕ್ಕೆ ಕರೆತಂದು ತಾತ್ಕಾಲಿಕ ಆಶ್ರಯ ಕಲ್ಪಿಸಿಕೊಡುವುದರೊಂದಿಗೆ, ಅವರಿಗೆ ಆಹಾರ ಔಷದೋಪಚಾರ ಒದಗಿಸುವ ಕೇಂದ್ರವಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಈ ಕೇಂದ್ರ.
ಈ ರಾತ್ರಿ ಆಶ್ರಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ವಸತಿರಹಿತರಿಗೆ, ನೂತನ ಸಂವತ್ಸರ 2025 ರ ಆರಂಭದ ದಿನ ಕಾಟನ್ ಪೇಟೆಯ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸುಮಂಗಳ ಪಿಎಸ್ಐ, ಸಂತೋಷ್ ಗೌಡ ಪಿಎಸ್ಐ, ನಾಗೇಶ್ ಪಿಎಸ್ಐ, ಅಪರಾಧ ವಿಭಾಗದ ಪಿಎಸ್ಐ ಕಾಳೇಗೌಡರವರುಗಳು ವಸತಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಕೆಲವು ಹಿತ ನುಡಿಗಳನ್ನು ಹೇಳಿ, ಅವರಲ್ಲಿ ಜೀವನೋತ್ಸಾಹ ಮೂಡಿಸುವ ಪ್ರಯತ್ನ ಮಾಡುವುದರೊಂದಿಗೆ, ಸಮಾಜ ಮುಖಿಯಾಗಿ ಮತ್ತೆ ಹೊಸ ಜೀವನ ಪ್ರಾರಂಭಿಸಬಹುದು ಎಂಬ ವಿಶ್ವಾಸ ಮೂಡಿಸಿ, ಎಲ್ಲರಿಗೂ ಶುಭ ಹಾರೈಸಿದರು.
ಈ ವೇಳೆ ಸುಮಾರು 100 ಬೆಡ್ಶೀಟ್ಗಳು, ಟೂತ್ ಪೇಸ್ಟ್-ಬ್ರಷ್ ಗಳು ಮತ್ತು ಸ್ನಾನದ ಸಾಬೂನುಗಳನ್ನು ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ ನಿರ್ದೇಶಕರಾದ ಡಾ. ರಾಮಚಂದ್ರಪ್ಪ ಎಚ್.ಟಿ. ರವರ ಉಪಸ್ಥಿತಿಯಲ್ಲಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ತಮ್ಮ ಕೊಡುಗೆಯಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಆಶ್ರಯ ಕೇಂದ್ರದ ವ್ಯವಸ್ಥಾಪಕರಾದ ಲಕ್ಷ್ಮಿ, ಶಿವಪ್ಪ ಹಾಗೂ ಇನ್ನಿತರರು ಹಾಜರಿದ್ದರು. ಪೊಲೀಸ್ ಇಲಾಖೆಯೂ ಸಹ ಸಾಮಾಜಿಕ ಕಾಳಜಿ ವಹಿಸಿ, ನೊಂದವರಿಗೆ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಹಾಗೂ ಶ್ಲಾಘನೀಯ ವಿಚಾರವಾಗಿದೆ.