ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ಬಳಿಕ ನಗರದಲ್ಲಿ ಪ್ರಮುಖವಾಗಿ ಎಂ.ಜಿ. ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ 15 ಟನ್ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳು ಸಂಗ್ರಹವಾಗಿದ್ದು, ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗಿದೆ.
ಬಿಬಿಎಂಪಿ ಪೂರ್ವ ವಲಯದ ಆಯುಕ್ತ ಸ್ನೇಹಲ್ ಆರ್ ಮತ್ತು ಬಿಎಸ್ಡಬ್ಲ್ಯುಎಂಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ಅವರು ಬುಧವಾರ ಬೆಳಗ್ಗೆ ನಗರದ ರಸ್ತೆಗಳನ್ನು ಪರಿಶೀಲನೆ ನಡೆಸಿದರು.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ ಬಾ ರಸ್ತೆಗಳಲ್ಲಿ ಬುಧವಾರ ಮುಂಜಾನೆ 3ರಿಂದ ಬೆಳಿಗ್ಗೆ 7ರವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. 15 ಟನ್ ತ್ಯಾಜ್ಯವನ್ನು ಬೀದಿಗಳಿಂದ ತೆರವುಗೊಳಿಸಲಾಗಿದೆ ಎಂದು ಬಿಎಸ್ಡಬ್ಲ್ಯುಎಂಎಲ್ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಂತಿನಗರ ಘನತ್ಯಾಜ್ಯ ವಿಭಾಗದಿಂದ ಸ್ವಚ್ಛತಾ ಕಾರ್ಯ ಮಾಡಲಾಗಿದ್ದು, 25 ಆಟೋ ಟಿಪ್ಪರ್ಗಳು, ಮೂರು ಕಾಂಪ್ಯಾಕ್ಟರ್ಗಳೊಂದಿಗೆ 70ಕ್ಕೂ ಹೆಚ್ಚು ಪೌರಕಾರ್ಮಿಕರು, ಕಿರಿಯ ಆರೋಗ್ಯ ಅಧಿಕಾರಿಗಳು, ಮಾರ್ಷಲ್ಗಳು ಕಾರ್ಯನಿರ್ವಹಿಸಿದರು.
ಸಿಬಿಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿದ್ದ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು, ಮದ್ಯದ ಬಾಟಲಿಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಹಿಸಲಾಗಿದೆ. ಪುನರ್ ಬಳಕೆಯ ಸುಮಾರು ಮೂರು ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.