ಬೆಂಗಳೂರು: ಹೊಸ ವರ್ಷ ಆಚರಣೆ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ರವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆಬೆಂಗಳೂರು ನಗರದ ಎಸಿಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳ ಸಭೆಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಸಲಿದ್ದಾರೆ.
ಇಂದುಸಂಜೆ ದಿನ ಪತ್ರಿಕೆಯ ಜೊತೆ ಮಾತನಾಡಿ ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಮಾಹಿತಿ ನೀಡಿದರು.ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಬೆಂಗಳೂರು ನಗರದ ಎಲ್ಲಾ ಎಸಿಪಿ, ಡಿಸಿಪಿ, ಅಡಿಷನಲ್ ಕಮಿಷನರ್ ಮತ್ತು ಜಾಯಿಂಟ್ ಕಮಿಷನರ್ ಸಂಚಾರ ರವರುಗಳನ್ನು ಉದ್ದೇಶಿಸಿ ಗೃಹಸಚಿವರು ಭಾಷಣ ಮಾಡಲಿದ್ದಾರೆ.
ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದು ಹೊಸ ವರ್ಷ ಆಚರಣೆಯಲ್ಲಿ ಮಾದಕ ವಸ್ತುಗಳನ್ನು ಕೂಟಗಳಲ್ಲಿ ಸೇವಿಸುವುದರ ಬಗ್ಗೆ ನಿಗಾ ವಹಿಸುವುದು, ಮಾರಾಟ ಮಾಡುವುದು ಮತ್ತು ಪತ್ತೆ ಹಚ್ಚುವ ಬಗ್ಗೆ ಸಭೆ ನಡೆಸಲಿದ್ದಾರೆ.ಇದಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯವೆಸಗದಂತೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ನಿಗಾ ವಹಿಸುವುದು.
ಇತ್ತೀಚೆಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು 24 ಕೋಟಿ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ನಗರ ಪೊಲೀಸ್ ಆಯುಕ್ತರ ಮಟ್ಟದಲ್ಲಿ ಪತ್ತೆ ಹಚ್ಚುವ ಬಗ್ಗೆಯೂ ಸಹ ವಿಚಾರ ವಿನಿಮಯ ಮಾಡಲಿದ್ದಾರೆ.
ಡಿಸೆಂಬರ್ 31ರ ರಾತ್ರಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಾದ ಎಂ ಜಿ ರಸ್ತೆ, ಬಾನಸ್ವಾಡಿ, ಇಂದಿರಾ ನಗರ, ಅಶೋಕನಗರ ಸೇರಿದಂತೆ ಸುಮಾರು 110 ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ವಿಶೇಷ ಬಂದೋಬಸ್ತ್ ಹೇಗೆ ಮಾಡಬೇಕೆಂದು ಚರ್ಚಿಸಲಿದ್ದಾರೆ.
ಕೂಟಗಳನ್ನು ಆಯೋಜಿಸುವವರ ನಿಖರ ಮಾಹಿತಿಯನ್ನು ಪಡೆದು ಯಾವುದೇ ಕಾರಣಕ್ಕೂ ಡ್ರಗ್ಸ್ ಮಾರಾಟ ಮಾಡಬಾರದೆಂದು ಪೊಲೀಸರಿಗೆ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ರವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಇದಲ್ಲದೆ 31ರಂದು ರಾತ್ರಿ 10 ರಿಂದ ಬೆಳಿಗ್ಗೆ ನಾಲಕ್ಕು ಗಂಟೆಗೆ ತನಕ ಎಲ್ಲಾ ಮೇಲ್ ಸೇತುವೆ ರಸ್ತೆಗಳನ್ನು ಮುಚ್ಚಬೇಕೆಂದು ಸಹ ಆದೇಶ ನೀಡಲಿದ್ದಾರೆ.
ಅಂದು ವಿಶೇಷವಾಗಿ ದ್ವಿಚಕ್ರವಾಹನಗಳಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಅಪಘಾತ ಸಂಭವಿಸಿ ಮೃತ ರಾಗಬಾರದೆಂದು ಸೂಚನೆ ನೀಡಲಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಬಗ್ಗೆ ಸಹ ಚರ್ಚೆ ನಡೆಸಲಿದ್ದಾರೆ.