ಬೆಂಗಳೂರು: ಹೊಸ ವರ್ಷ 2025ನ್ನು ಅದ್ಧೂರಿಯಾಗಿ ಸ್ವಾಗತಿಸಲು ರಾಜ್ಯದ ವಿವಿಧೆಡೆ ಸಿದ್ಧತೆಗಳು ನಡೆಯುತ್ತಿವೆ.ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದಾರೆ.ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಮತ್ತಿತರ ಕಡೆ ಹೆಚ್ಚಾಗಿ ಜನ ದಟ್ಟಣೆ ಜಮಾಯಿಸುವುದರಿಂದ ಈ ಸ್ಥಳಗಳಲ್ಲಿ ಪೊಲೀಸರು ತೀವ್ರ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಾರೆ.
ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆವಿದ್ಯುತ್ ದೀಪಗಳ ಅಲಂಕಾರದಿಂದ ರಸ್ತೆಗಳು ಜಗಮಗಿಸುತ್ತಿವೆ.ಮುಂಜಾಗ್ರತಾ ಕ್ರಮವಾಗಿ ರಾತ್ರಿ 9
ಗಂಟೆಯಿಂದ ಬೆಂಗಳೂರಿನ ಬಹುತೇಕ ಕಡೆಯಿರುವ ಪ್ರಮುಖ ಪ್ಲೈಓವರ್ಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. 7ಗಂಟೆಯ ನಂತರ ಎಂಜಿ ರಸ್ತೆ, ಬ್ರಿಗೆಡ್ ರಸ್ತೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಈ ರಸ್ತೆಗಳಲ್ಲಿರುವ ಪ್ರಮುಖ ಹೋಟೆಲ್ ಬಾರ್ಗಳಲ್ಲಿ ಕಾರ್ಯಕ್ರಮಗಳಿಗೆ ಎಲ್ಲಾ ವಿಧಿಸಲಾಗಿದ್ದ ಟಿಕೆಟ್ಗಳ ಮಾರಾಟ ಮುಕ್ತಾಯವಾಗಿದ್ದು, ಇಂದು ಸಹ ಬೆಳಗ್ಗೆಯಿಂದ ಪಾರ್ಟಿಗಳಿಗೆ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಲು ಹೊಟೇಲ್ಗಳ ಮುಂದೆ ಜನ ಜಮಾಯಿಸಿದ್ದರು.
ಮಹಿಳೆಯರು ಹೆಚ್ಚಾಗಿ ಸೇರುವ ಕಡೆ ಅವರ ಸುರಕ್ಷತೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಸುಮಾರು 7500 ಸಿಸಿಟಿವಿಗಳನ್ನು ಬಂದು ಹೋಗುವವರ ಮೇಲೆ ನಿಗಾವಹಿಸಲು ಅಳವಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.ಹೊಸ ವರ್ಷಾಚರಣೆಯನ್ನು ಬಹಳ ಎಚ್ಚರಿಕೆಯಿಂದ ಆಚರಣೆ ಮಾಡುವಂತೆ ಅವರು ಸಲಹೆ ಮಾಡಿದ್ದಾರೆ.ಕಡಲ ತೀರಗಳಿರುವ ಉತ್ತರಕನ್ನಡ, ದಕ್ಷಿಣ ಕನ್ನಡಜಿಲ್ಲೆಯ ಬೀಚ್ಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದ್ದು, ವಿವಿಧ ಪ್ರಮುಖ ನಗರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಆಯಾ ಇಲಾಖೆಗಳ ಮುಖಸ್ಥರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.