ಬೆಳಗಾವಿ: ಇಂದು ಮಧ್ಯಾಹ್ನ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಭೆ ಮಾಡ್ತಿವಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಹೋರಾಟಕ್ಕೆ ಹೆದರಿಕೆ ಆಗಿದೆ. ನಮ್ಮ ಶಾಸಕರಿಗೆ ಆಮೀಷ ತೋರಿಸಿ ಹೋರಾಟ ಹತ್ತಿಕ್ಕುವ ಯತ್ನಕ್ಕೆ ಕೈ ಹಾಕಿದೆ ಎಂದು ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.
ಇಂದಿನಿಂದ ಬೆಳಗಾವಿ (Belagavi) ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಸೇರಿದಂತೆ ಇಡೀ ಸರ್ಕಾರ ಮತ್ತು ವಿರೋಧ ಪಕ್ಷದ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಯ ಬಿಸಿ ತಟ್ಟಿದ್ದು, ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ 11 ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದರ ಮಧ್ಯೆ ಪಂಚಮಸಾಲಿ 2A ಮೀಸಲಾತಿಗಾಗಿ ಆಗ್ರಹಿಸಿ ನಾಳೆಯಿಂದ ಬೃಹತ್ ಹೋರಾಟ ನಡೆಸಲು ಮುಂದಾಗಿದ್ದು, ಇದು ಕೂಡ ಚಳಿಗಾಲದ ಅಧಿವೇಶನದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.
ಈತನ್ಮಧ್ಯೆ, ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ. ನ್ಯೂಸ್18ಗೆ ಪ್ರತಿಕ್ರಿಯೆ ನೀಡಿದ ಬಸವಜಯ ಮೃತ್ಯುಂಜಯ ಶ್ರೀ, ಪಂಚಮಸಾಲಿ 2A ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ ಹೋರಾಟದಲ್ಲಿ ಟ್ರ್ಯಾಕ್ಟರ್, ಕ್ರೂಸರ್ ವಾಹನ ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ನಿಷೇಧಾಜ್ಞೆ ವಾಪಸ್ ಪಡೆಯುತ್ತೇನೆ ಎಂದಿದ್ದಾರೆ, ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಬಾರದು ಎಂದು ಹೇಳಿದರು.
ಇಂದು ಮಧ್ಯಾಹ್ನ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಭೆ ಮಾಡ್ತಿವಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಹೋರಾಟಕ್ಕೆ ಹೆದರಿಕೆ ಆಗಿದೆ. ನಮ್ಮ ಶಾಸಕರಿಗೆ ಆಮೀಷ ತೋರಿಸಿ ಹೋರಾಟ ಹತ್ತಿಕ್ಕುವ ಯತ್ನಕ್ಕೆ ಕೈ ಹಾಕಿದೆ ಎಂದು ಹೇಳಿದ ಬಸವಜಯ ಮೃತ್ಯುಂಜಯ ಶ್ರೀ, ನಮ್ಮ ಋಣವನ್ನು, ಕೃತಜ್ಞತೆಯನ್ನು ಸರ್ಕಾರ ಮರೆತಿದೆ. ವಾಹನ ಹಿಡಿದ್ರು, ಕಾಲ್ನಡಿಗೆಯ ಮೂಲಕ ಬಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋದು ಖಚಿತ. ನಮ್ಮ ಸಮುದಾಯದ ಶಾಸಕರು ಬೆಂಗಳೂನಿಂದ ಬಂದ ಶಾಸಕರನ್ನು ಮನೆಗೆ ಕರೆದು ಚಾ ಕುಡಿಸಲಿ, ಅವರ ಸಚಿವರನ್ನು ಸ್ವಾಗತಿಸುವ ಪ್ಲೆಕ್ಸ್ ಹಾಕಿದ್ದಾರೆ. ಸಮಸ್ಯೆ ಬಗೆಹರಿಸಲು ಯತ್ನಿಸಬೇಕಿದ್ದವರೇ ಸಂತೋಷ ಪಡುತ್ತಿದ್ದಾರೆ ಎಂದು ಕಿಡಿಕಾರಿದರು.
2A ಮೀಸಲಾತಿ ಆದೇಶ ಹೊರಡಿಸಿದ್ರೆ ಸಿಎಂ, ಡಿಸಿಎಂ ಇಬ್ಬರನ್ನು ಸನ್ಮಾನ ಮಾಡ್ತಿನಿ ಎಂದ ಬಸವಜಯ ಮೃತ್ಯುಂಜಯ ಶ್ರೀ, ತೆರೆ ಮರೆಯಲ್ಲಿ ಇದ್ದುಕೊಂಡು ಕೆಡಿಸುವ ಕೆಲವರು ಯತ್ನ ಮಾಡುತ್ತಿದ್ದಾರೆ. ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಬೆಂಬಲಿಗರು ಬರ್ತಾರೆ. ಶಾಸಕರು ಬಹಿರಂಗವಾಗಿ ಸಮಾವೇಶದಲ್ಲಿ ಬಂದು ಭಾಗವಹಿಸಬೇಕು. ನಾಳೆ ಹೋರಾಟವನ್ನು ಹತ್ತಿಕ್ಕಲು ಯತ್ನ ಮಾಡಿದ್ರೆ ನಿಮ್ಮೆಲ್ಲರ ಮೇಲೆ ಪಂಚಮಸಾಲಿಗಳು ಬೇಜಾರು ಅಗಲಿದ್ದಾರೆ. ಇದು ಉಗ್ರ ಹೋರಾಟಕ್ಕೆ ಕಾರಣವಾಗುತ್ತದೆ. ಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡ್ತಿವಿ. ಹೋರಾಟವನ್ನು ಹತ್ತಿಕ್ಕಲು ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಹೇಳಿದರು.