ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡುಗಡೆ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷಗಳ ಸಭೆ ಭಾನುವಾರ ಸಂಜೆ ಜರುಗಿತು.
ತಮಿಳುನಾಡಿಗೆ ಜುಲೈ ಅಂತ್ಯದವರೆಗೆ ಪ್ರತಿದಿನ 1 ಟಿಎಂಸಿ ನೀರು ಬಿಡುವುದರ ಬದಲಾಗಿ ಸದ್ಯದ ಕಾವೇರಿ ಜಲಾನಯದ ಪ್ರದೇಶದ 4 ಜಲಾಶಯಗಳ ಜಲಸ್ಥಿತಿಗತಿ ಆಧರಿಸಿ ನಿತ್ಯ 8ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧರಿಸಲಾಗಿದೆ. ನಿತ್ಯ 1 ಟಿಎಂಸಿ ನೀರು ಬಿಡುವುದಕ್ಕಾಗುವುದಿಲ್ಲವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)ಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳೆಯ ಪ್ರಮಾಣ ಕಡಿಮೆ ಆದಲ್ಲಿ ನೀರು ಹರಿಯುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲಾಗುವುದು. ಉತ್ತಮ ಮಳೆಯಾದಲ್ಲಿ ನಿಗದಿಪಡಿಸಿದಷ್ಟು ನೀರು ಹರಿಸಲಾಗುವುದು ಎಂದು ಅವರು ಹೇಳಿದರು.ಜೂನ್ ಮತ್ತು ಜುಲೈ ತಿಂಗಳ ಅಂತ್ಯದವರೆಗೆ 40.43 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್ ನಿಂದ ಇಲ್ಲಿಯವರೆಗೆ 5 ಟಿಎಂಸಿ ಗೂ ಹೆಚ್ಚು ನೀರು ತಮಿಳುನಾಡಿಗೆ ಹರಿಬಿಡಲಾಗಿದೆ.
ಸದ್ಯ ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳಲ್ಲಿ ಶೇ.63ರಷ್ಟು ನೀರು ಸಂಗ್ರಹವಾಗಿದೆ ಅಷ್ಟೇ ಎಂದು ಹೇಳಿದ ಅವರು ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ನೀರು ಒಳಹರಿವಿಕೆಯ ಪ್ರಮಾಣ ಕಡಿಮೆಯಾಗಿದೆ ಎಂದರು.ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯದ ಸ್ಥಿತಿಯನ್ನು ಸಭೆಯ ಮುಂದಿಟ್ಟರು.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಾತರಕಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜೆಡಿಎಸ್ ನ ಹಿರಿಯ ನಾಯಕ ಜಿ.ಟಿ.ದೇವೇಗೌಡ ಸೇರಿದಂತೆ ಅನೇಕರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸದಸ್ಯರುಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.