ನೆಲಮಂಗಲ: ಇತ್ತೀಚೆಗೆ ಕೂಡು ಕುಟುಂಬಗಳನ್ನ ಕಾಣುವುದು ತುಂಬಾ ಕಡಿಮೆಯಾಗಿದೆ. ಅದರಲ್ಲೂ ವಯಸ್ಸಾದವರನ್ನ ತಿರಸ್ಕಾರ ಮನೋಭಾವನೆಯಿಂದಲೇ ಕಾಣುತ್ತಾರೆ. ಆದರೆ ಇಲ್ಲೊಂದು ಕೂಡು ಕುಟುಂಬ ಇವತ್ತು ಒಟ್ಟಿಗೆ ಸೇರಿ ಶತಾಯುಷಿ ನರಸಯ್ಯ ರವರ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ನೆಲಮಂಗಲದ ಆರ್ ಆರ್ ರೆಸಾರ್ಟ್ ನಲ್ಲಿ ಶ್ರೀಯುತ ನರಸಯ್ಯ ರವರ 101ನೇ ವರ್ಷ ಹುಟ್ಟುಹಬ್ಬ ಆಚರಣೆ ಯನ್ನು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ನರಸಯ್ಯ ರವರ ಮಗಳು ಎನ್ ಜಲಜಾಕ್ಷಿ ಮಾತನಾಡಿ ನಮ್ಮ ತಂದೆಯವರು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ 1923ರಲ್ಲಿ ಜನಿಸಿದರು.
ಇವರು ಸರಕಾರಿ ಹುದ್ದೆಯಲ್ಲಿ ಹಲವು ಸೇವೆಗಳನ್ನು ಸಲ್ಲಿಸಿದ್ದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ರವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದರು. ಹಾಗೂ ಭಗವಾನ್ ಸತ್ಯಸಾಯಿ ಬಾಬಾರವರ ಪರಮಭಕ್ತರಾಗಿದ್ದು ಅವರ ಅನುಗ್ರಹದಿಂದ ಮಾನವ ಸೇವೆಯೇ ಮಾಧವ ಸೇವೆ ಎಂದು ನೊಂದವರಿಗೆ ಬಡವರಿಗೆ ಸೇವೆ ಮಾಡುತ ಬಂದಿರುತ್ತಾರೆ. ಇವರಿಗೆ ಆರು ಜನ ಮಕ್ಕಳಿದ್ದು ಕೆಲವರು ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸಿರುತ್ತಾರೆ.
ಒಬ್ಬ ವ್ಯಕ್ತಿ ಶತಾಯುಷ್ಯ ಕಾಣುವುದು ಎಂದರೆ ಸಾಮಾನ್ಯ ವಿಷಯವಲ್ಲ ಅವರ ವೈಯಕ್ತಿಕ ಶಿಸ್ತು ಸಮಯ ತಾಳ್ಮೆ ಸಹನೆ ಹಾಗೂ ಅವರ ಆಹಾರ ಅಭ್ಯಾಸಗಳೇ ಅವರ ಆರೋಗ್ಯವನ್ನು ಕಾಪಾಡುತ್ತಿದ್ದು ಇಂದು ನೂರು ವರ್ಷ ಪೂರೈಸಿ 101ನೇ ಹುಟ್ಟು ಹಬ್ಬವನ್ನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆಪ್ರಯುಕ್ತ ಸೀರೆ ಪಂಚೆ ಹಾಗೂ ಕಂಬಳಿಗಳು ಸೇರಿದಂತೆ ಹಲವು ಉಡುಗೊರೆಗಳನ್ನು ನೀಡಲಾಯಿತು. ಹಾಗೂ ಹಿರಿಯರಿಗೆ ಸನ್ಮಾನಿಸಿ ಊಟದ ವ್ಯವಸ್ಥೆ ಮಾಡಲಾಯಿತು. ಸ್ನೇಹಿತರು ಬಂಧು ಬಳಗದವರು ಸೇರಿ ಶ್ರೀಯುತರ ಆಶೀರ್ವಾದ ಪಡೆದು ಶುಭ ಹಾರೈಸಿದರು. ಈ ಕುಟುಂಬ ನೂರು ವರ್ಷ ಪೂರೈಸಿರುವ ನರಸಯ್ಯ ಅವರ ಹುಟ್ಟುಹಬ್ಬ ಸಂಭ್ರಮ ಆಚರಿಸಿ ಇತರರಿಗೂ ಮಾದರಿಯಾಗಿದ್ದಾರೆ.