ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಹೆಚ್ಚಿನ ಚಿಕಿತ್ಸೆಗೆ ಲಂಡನ್ಗೆ ತೆರಳಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹೀಗಾದಲ್ಲಿ ಅವರು ಐಪಿಎಲ್ ನ ಮೊದಲಾರ್ಧದ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದ ರಾಹುಲ್ ಎರಡನೇ ಪಂದ್ಯದ ವೇಳೆಗೆ ತೊಡೆನೋವಿಗೊಳಗಾಗಿದ್ದರು.
ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಬಳಿಕ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆಗಲೇ ಅಭ್ಯಾಸವನ್ನೂ ಆರಂಭಿಸಿದ್ದರು. ಹಾಗಿದ್ದರೂ ಅವರು 100% ಫಿಟ್ ಆಗಿರಲಿಲ್ಲ.ಈಗಲೂ ರಾಹುಲ್ ನೋವಿನಿಂದ ಗುಣಮುಖರಾಗಿಲ್ಲ ಎನ್ನಲಾಗಿದೆ.
ಹೀಗಾಗಿ ಅವರನ್ನು ಬಿಸಿಸಿಐ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ಕಳುಹಿಸಿದೆ. ಅವರ ಗಾಯದ ತೀವ್ರತೆ ನೋಡಿಕೊಂಡು ವೈದ್ಯರು ಚಿಕಿತ್ಸೆ ಕುರಿತು ನಿರ್ಧರಿಸಲಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.ಒಂದು ವೇಳೆ ಗಾಯ ಗಂಭೀರವಾಗಿದ್ದರೆ ರಾಹುಲ್ ಮಾರ್ಚ್ ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್ ನ ಮೊದಲಾರ್ಧದ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ.
ಹೀಗಾದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೊಸ ನಾಯಕನನ್ನು ಕಂಡುಕೊಳ್ಳಬೇಕಿದೆ. ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಐದನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಇದು ಔಪಚಾರಿಕ ಪಂದ್ಯವಾಗಿರಲಿದೆ.