ದೇವನಹಳ್ಳಿ: ಭೂಸ್ವಾಧೀನವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ಧಿಷ್ಟ ಅವದಿ ಧರಣಿಗೆ 1000 ದಿನಗಳಾಗುತ್ತಿರುವ ಹಿನ್ನೆಲೆಯಲ್ಲಿ, ರೈತರ ಸಮಸ್ಯೆಯನ್ನು ಶೀಘ್ರವೆ ಬಗೆಹರಿಸಲು ಮುಖ್ಯಮಂತ್ರಿಗಳು ಸಭೆ ಕರೆಯುವಂತೆ ಒತ್ತಾಯಿಸಿ ಧರಣಿ ಸ್ಥಳದಿಂದ ಜಿಲ್ಲಾ ಕಛೇರಿಗೆ ಕಾಲ್ನೆಡಿಗೆ ಜಾಥ ಮತ್ತು ಜಿಲ್ಲಾಭವನದ ಮುಂದೆ ಅನಿರ್ಧಿಷ್ಟ ಅವಧಿ ಧರಣಿ ನಡೆಸಲು ಸಮಿತಿಯು ತೀರ್ಮಾನಿಸಿತ್ತು, ರಾಜ್ಯದ ವಿವಿಧ ಸಂಘಟನೆಗಳು ರೈತರನ್ನು ಬೆಂಬಲಿಸಿ ಜೊತೆಗಿರುವುದಾಗಿ ಪ್ರಕಟಿಸಿದ್ದವು.
ಕಾಲ್ನೆಡಿಗೆ ಜಾಥಕ್ಕೆ ಸಿದ್ದತೆಗಳು ಪಾರಂಭವಾಗುತ್ತಿದ್ದಂತೆ ಇದೇ 23ರಂದು ಜಿಲ್ಲಾ ಉಸ್ತುವಾರಿ ಸಚಿವರ ಮದ್ಯಸ್ಥಿಕೆಯಲ್ಲಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೈತರ ನಿಯೋಗದೊಂದಿಗೆ ಸಭೆ ನಡೆಸಲಾಯಿತು.ಚನ್ನರಾಯಪಟ್ಟಣ ಹೋಬಳಿಯಲ್ಲಿ ಈಗಾಗಲೇ ಹಲವು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದರಿಂದ ಹೊಸದಾಗಿ ಭೂಸ್ವಾಧೀನ ನಡೆಸಬಾರದು ಮತ್ತು ಇಲ್ಲಿಯ ಸಣ್ಣ ರೈತರ ಮತ್ತು ಹಿಂದುಳಿದ ಸಮುದಾಯಗಳ ಘನತೆ ಮತ್ತು ಬದುಕಿನ ಆದಾರವಾಗಿರುವ ಈ ತುಂಡುಭೂಮಿಗಳನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಮಾಡಿಕೊಳ್ಳಬಾರದು ಎಂದು ನಿಯೋಗ ಒತ್ತಾಯಿಸಿತು. ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪನವರು ಸಹ ರೈತರ ಮಾತಿಗೆ ದ್ವನಿಗೂಡಿಸಿದರು.
ರೈತರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ರೈತರು ಭೂಮಿ ಬಿಡಲು ತಯಾರಿಲ್ಲ ಆದ್ದರಿಂದ ಕಾನೂನಾತ್ಮಕವಾಗಿ ಏನು ಮಾಡಬಹುದು” ಎಂದು, ಸಭೆಯಲ್ಲಿ ಹಾಜರಿದ್ದ ಕೆ.ಐ.ಎ.ಡಿ.ಬಿ ಅಧಿಕಾರಿಗಳನ್ನು ಕೇಳಿದಾಗ, 1777 ಎಕರೆಯ ಪೈಕಿ, 430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಆದ್ದರಿಂದ ಅಂತಿಮ ಅಧಿಸೂಚನೆ ಆಗಿರುವ ಜಮೀನು ಕೈಬಿಡುವುದು ಸ್ವಲ್ಪ ಕಷ್ಟವಾಗಬಹುದು” ಎಂದು ಅಧಿಕಾರಿಗಳು ತಿಳಿಸಿದರು.
ತಕ್ಷಣವೇ ಅಧಿಕಾರಿಗಳ ಮಾತಿಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ರೈತರ ವಿರೋಧಕ್ಕೆ ಪ್ರತಿಕ್ರಿಸಿದ ಮುಖ್ಯಮಂತ್ರಿಗಳು “ಸರ್ಕಾರ ರೈತರ ಪರವಾಗಿದ್ದು ಈ ವಿಷಯದ ಕುರಿತು ಹಿರಿಯ ಅಧಿಕಾರಿಗಳು ಕಾನೂನು ತಜ್ಞರು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಸಹ ಪಡೆದುಕೊಂಡು ಜನವರಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು, ಈ ನಿರ್ಧಾರ ರೈತರ ಪರವಾಗಿರಲಿದೆ”ಎಂದು ಭರವಸೆ ನೀಡಿದರು.
ನಂತರ, ರೈತರ ನಿಯೋಗ “ಸ್ವಾಧೀನಕ್ಕೂಳಪಟ್ಟಿರುವ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಕೈ ಬಿಡಲೇಬೇಕು” ಎಂಬ ಸ್ಪಷ್ಟ ನಿಲುವನ್ನು ತಿಳಿಸಿ ಹಿಂದಿರುಗಿತು.
ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆ ಕಾಲ್ನಡಿಗೆ ಜಾಥ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿ ಡಿ.30 ರಂದು ರೈತರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ನಲ್ಲಪ್ಪನಹಳ್ಳಿ ನಂಜಪ್ಪ ತಿಳಿಸಿದರು.
ಮುಖ್ಯಮಂತ್ರಿಗಳು ಸಭೆಯಲ್ಲಿ ರೈತರ ಹಿತಕಾಯುವ ಬರವಸೆಯ ನೀಡಿದ ಹಿನ್ನೆಲೆಯಲ್ಲಿ, ವಿವಿಧ ಸಂಘಟನೆಗಳ, ಮುಖಂಡರುಗಳ ಸಲಹೆಯಂತೆ ಕಾಲ್ನಡಿಗೆ ಜಾಥ ಮತ್ತು ಜಿಲ್ಲಾಡಳಿತ ಭವನದ ಮುಂದ್ದಕ್ಕೆ ಸ್ಥಳಾಂತರಿಸಲು ಉದ್ದೇಶಿಸಿದ್ದ ಅನಿರ್ದಿಷ್ಟ ಅವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ದಿನಾಂಕ ಡಿಸೆಂಬರ್ 30 ರಂದು ರೈತರ ಬೃಹತ್ ಸಮಾವೇಶ ನಡೆಸಲು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಮಾರೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ, ಕಾರಹಳ್ಳಿ ಶ್ರೀನಿವಾಸ್, ರೈತ ಮುಖಂಡರಾದ ರೈತ ಮುಖಂಡರಾದ ತಿಮ್ಮರಾಯಪ್ಪ, ಬಿದಲೂರು ರಮೇಶ್, ಸೊಣ್ಣೇಗೌಡ, ಮಾರೇಗೌಡ, ಹನುಮಂತರಾಯಪ್ಪ, ಅಶ್ವಥಪ್ಪ, ಮುಕುಂದ, ತಿಮ್ಮರಾಯಪ್ಪ, ಮೋಹನ್, ಪ್ರವೀಣ್, ನಂದನ್, ವಿನೋದ್, ಗೋಪಿನಾಥ್, ಕೃಷ್ಣಪ್ಪ, ನಂಜೇಗೌಡ, ಮುನೇಗೌಡ, ವೆಂಕಟರಮಣಪ್ಪ ಸೇರಿದಂತೆ 13 ಹಳ್ಳಿಗಳ ರೈತರು ಭಾಗಿಯಾದಿದ್ದರು.