ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ 2025ರಲ್ಲಿ 38763 ಕಫ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ 1096 ಕ್ಷಯರೋಗವುಳ್ಳವರು ಪತ್ತೆಯಾಗಿದ್ದಾರೆ. ಇವರಲ್ಲಿ 48 ಮಂದಿ ಔಷಧ ನಿರೋಧಕ ಕ್ಷಯವಾಗಿದ್ದು (ಡಿಆರ್ಟಿಬಿ), ಎಲ್ಲರಿಗೂ ಉಚಿತ ಚಿಕಿತ್ಸೆ, ಅನುಸರಣೆ, ಆಪ್ತ ಸಮಾಲೋಚನೆ, ಸಲಹೆ, ಬೆಂಬಲವನ್ನು ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುತ್ತಿದೆ.
ಕ್ಷಯರೋಗ ಅಥವಾ ಟಿಬಿ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಪ್ರತಿ ವರ್ಷ ವಿಶ್ವದಲ್ಲಿ ಪತ್ತೆಯಾಗುವ ಕ್ಷಯರೋಗಿಗಳಲ್ಲಿ ಶೇ. 27ರಷ್ಟು ನಮ್ಮ ದೇಶದಲ್ಲಿ ಇದ್ದಾರೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ನ್ಯಾಷನಲ್ ಟಿಬಿ ಎಲಿಮಿನೇಷನ್ ಪ್ರೋಗ್ರಾಮ್) ಅಡಿಯಲ್ಲಿ ದೇಶದಲ್ಲಿ ಪ್ರತಿ ವರ್ಷ ಅಂದಾಜು 28 ಲಕ್ಷ ಮಂದಿ ಟಿಬಿ ಕಾಯಿಲೆಗೆ ಒಳಗಾದವರನ್ನು ಪತ್ತೆ ಹಚ್ಚಲಾಗುತ್ತದೆ. ಸುಮಾರು 3 ಲಕ್ಷ ಮಂದಿ ಇದರಿಂದ ಮರಣ ಹೊಂದುತ್ತಿದ್ದಾರೆ.
ಒಬ್ಬ ರೋಗಿಯಿಂದ ಅವನು ಕೆಮ್ಮಿದಾಗ, ಸೀನಿದಾಗ, ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟಿರಿಯವು ಗಾಳಿಯ ಮೂಲಕ ಇತರರಿಗೆ ಹರಡುತ್ತದೆ. ಮುಖ್ಯವಾಗಿ ಕ್ಷಯರೋಗ ಶ್ವಾಸಕೋಶಗಳಿಗೆ ಆವರಿಸುವುದರಿಂದ ಪಲ್ಮನರಿ ಟಿಬಿ ಕೆಮ್ಮು, ಜ್ವರ, ನಿಶ್ಯಕ್ತಿ, ಹಸಿವು ಕಡಿಮೆಯಾಗುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಕಾಣುವುದು, ಎದೆ ನೋವು, ರಾತ್ರಿ ಬೆವರುವುದು ಸಾಮಾನ್ಯ ಲಕ್ಷಣಗಳಾಗಿರುತ್ತದೆ. 2 ವಾರಗಳ ಕಾಲ ಈ ಲಕ್ಷಣಗಳಿರುವವರು ವೈದ್ಯರಿಗೆ ತೋರಿಸಿ ಅವರ ಸಲಹೆಯಂತೆ ಕಫ ಪರೀಕ್ಷೆ, ಎಕ್ಸ್-ರೇ ಪರೀಕ್ಷೆ ಮಾಡಿಸಬೇಕಾಗುತ್ತದೆ.
ಕ್ಷಯರೋಗವನ್ನು ಶೀಘ್ರ ಪತ್ತೆ ಮಾಡುವುದರಿಂದ ಮತ್ತು ಸಂಪೂರ್ಣ ಚಿಕಿತ್ಸೆಯನ್ನು ಪಡೆಯುವುದರಿಂದ ಪೂರ್ಣವಾಗಿ ಗುಣ ಪಡಿಸಿಕೊಳ್ಳಬಹುದು. ಆರೋಗ್ಯ ಇಲಾಖೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯರೋಗ ಪತ್ತೆಯಾದರು ಸಹ ಸರ್ಕಾರದ ವತಿಯಿಂದ ಉಚಿತವಾಗಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ.
ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಅಃಓಂAಖಿ, ಖಿಖUಓಇಓಂಖಿ ಯಂತ್ರಗಳು ಮತ್ತು ಸೂಕ್ಷ್ಮದರ್ಶಕ ಯಂತ್ರಗಳ ಮೂಲಕ ಉಚಿತವಾಗಿ ಕಫ ಪರೀಕ್ಷೆ ಮಾಡಲಾಗುತ್ತಿದ್ದು, ಉಚಿತವಾಗಿ ಚಿಕಿತ್ಸೆಯನ್ನು ಕ್ಷಯರೋಗಿಗಳು ವಾಸವಾಗಿರುವ ಸ್ಥಳದಲ್ಲೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮುಖಾಂತರ ನೀಡಲಾಗುತ್ತಿದೆ. ಎದೆ ಭಾಗದ ಎಕ್ಸ್-ರೇ ಮಾಡುವುದು ಟಿಬಿ ಪತ್ತೆ ಹಚ್ಚುವ ಒಂದು ವಿಧಾನವಾಗಿದ್ದು, 7 ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು 4 ಖಾಸಗಿ ಒಡಂಬಡಿಕೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ.
ಜಿಲ್ಲಾ ಕ್ಷಯರೋಗ ಕೇಂದ್ರದಲ್ಲಿ ಇರುವ 2 ಮೊಬೈಲ್ ಎಕ್ಸ್-ರೇ ಯಂತ್ರಗಳ ಮೂಲಕ ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ಮಟ್ಟದಲ್ಲಿ ಕ್ಷಯರೋಗ ಪತ್ತೆ ಮಾಡುವ ಶಿಬಿರಗಳನ್ನು ನಡೆಸಲಾಗುತ್ತಿದೆ.
ಕ್ಷಯರೋಗವು ಒಂದು ಸಾಮಾಜಿಕ ಕಾಯಿಲೆಯಾಗಿರುವುದರಿಂದ ಸಮುದಾಯದ ಎಲ್ಲರೂ ಕ್ಷಯರೋಗ ನಿರ್ಮೂಲನೆಯಲ್ಲಿ ಕೈಜೋಡಿಸಬೇಕಿರುತ್ತದೆ. ಈ ನಿಟ್ಟಿಯಲ್ಲಿ ಜಿಲ್ಲೆಯ ಟಿಬಿ ಫಾರ್ಮ್ ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ ಮತ್ತು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಅಧ್ಯಕ್ಷರಾಗಿರುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ಟಿಬಿ ಫಾರ್ಮ್ ಸಭೆ ನಡೆಸಲಾಗುತ್ತದೆ. ಕ್ಷಯರೋಗ ಕಾರ್ಯಕ್ರಮದ ಪ್ರಗತಿಯ ಬಗ್ಗೆ ಚರ್ಚಿಸಿ ಕ್ಷಯರೋಗ ನಿರ್ಮೂಲನೆಗೆ ಬೇಕಾಗಿರುವ ಬೆಂಬಲ ಮತ್ತು ಪ್ರೋತ್ಸಾಹವನ್ನು ಪಡೆದುಕೊಳ್ಳುವ ಬಗ್ಗೆ ಚರ್ಚಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಭಾರತದ ಸೆಂಟ್ರಲ್ ಟಿಬಿ ಡಿವಿಷನ್ ವತಿಯಿಂದ 2023 ರಿಂದ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕ್ಷಯರೋಗಿಗಳ ಅಂಕಿ ಅಂಶಗಳನ್ನು, ಚಿಕಿತ್ಸೆ ಪೂರ್ಣಗೊಂಡಿರುವುದು ಮತ್ತು ಸಮುದಾಯದ ಬೆಂಬಲಗಳನ್ನು ಆಧರಿಸಿ ‘ಕ್ಷಯ ಮುಕ್ತ ಗ್ರಾಮ ಪಂಚಾಯಿತಿ’ಗಳೆAದು ಘೋಷಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ಮೊದಲನೆಯದಾಗಿ ಪ್ರತಿ 1000 ಜನಸಂಖ್ಯೆಗೆ ವರ್ಷಕ್ಕೆ ಕನಿಷ್ಠ 30 ಸಂಶಯಾಸ್ಪದ ಕ್ಷಯರೋಗಿಗಳಿಗೆ ಕಫ ಪರೀಕ್ಷೆಯಾಗಿರಬೇಕು. ಎರಡನೇಯದಾಗಿ ಆ ವರ್ಷದಲ್ಲಿ 1000 ಜನಸಂಖ್ಯೆಗೆ 1 ಅಥವಾ ಅದಕ್ಕಿಂತ ಕಡಿಮೆ ಕ್ಷಯರೋಗಿಗಳು ಪತ್ತೆಯಾಗಿದ್ದಲ್ಲಿ ಈ ಗ್ರಾಮ ಪಂಚಾಯಿತಿಗಳನ್ನು ಉಳಿದ 4 ಸೂಚ್ಯಂಕಗಳನ್ನು ಜಿಲ್ಲಾ ಮಟ್ಟದ ಪರಿಶೀಲನಾ ತಂಡಗಳಿAದ ದೃಡೀಕರಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿ, ಅವರ ಅನುಮೋದನೆ ಪಡೆದು, ನಂತರ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳಿಂದ “ವಿಶ್ವ ಕ್ಷಯರೋಗ ದಿನ”ದಂದು (24 ಮಾರ್ಚ್) ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳೆAದು ಆ ವರ್ಷಕ್ಕೆ ಘೋಷಿಸಲ್ಪಡುತ್ತವೆ. ಮೊದಲನೆ ಬಾರಿಗೆ ಕಂಚಿನ ಸ್ಥಾನವೆಂದು ಸತತ 2ನೇ ಬಾರಿಗೆ ಬೆಳ್ಳಿ ಸ್ಥಾನವೆಂದು, ಸತತ 3ನೇ ಬಾರಿಯಾದರೆ ಚಿನ್ನದ ಸ್ಥಾನವೆಂದು ಘೋಷಿಸಲ್ಪಡುತ್ತವೆ.
ಚಾಮರಾಜನಗರ ಜಿಲ್ಲೆಯಲ್ಲಿ 130 ಪಂಚಾಯಿತಿಗಳಲ್ಲಿ 2023ರಲ್ಲಿ 13 ಗ್ರಾಮ ಪಂಚಾಯತಿಗಳು ಹಾಗೂ 2024ರಲ್ಲಿ 35 ಗ್ರಾಮ ಪಂಚಾಯತಿಗಳು ಕ್ಷಯಮುಕ್ತ ಎಂದು ಘೋಷಿಸಲ್ಪಟ್ಟಿದ್ದವು. ಕಳೆದ ವರ್ಷ 2025ರಲ್ಲಿ 55 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವೆಂದು ಘೋಷಿಸಲು ಅರ್ಹತೆಯನ್ನು ಪಡೆದಿದ್ದು, ಇದರಲ್ಲಿ 35 ಗ್ರಾಮ ಪಂಚಾಯಿತಿಗಳು 1ನೇ ಬಾರಿಗೆ, 15 ಗ್ರಾಮ ಪಂಚಾಯಿತಿಗಳು ಸತತ 2ನೇ ಬಾರಿಗೆ ಹಾಗೂ 5 ಗ್ರಾಮ ಪಂಚಾಯಿತಿಗಳು ಸತತ 3ನೇ ಬಾರಿಗೆ ಕ್ಷಯಮುಕ್ತವಾಗಿ ಆಯ್ಕೆಯಾಗಿರುತ್ತವೆ.
ಸಮುದಾಯ ಬೆಂಬಲದ ಅಡಿಯಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ನಿ-ಕ್ಷಯ್ ಮಿತ್ರ ಎಂದು ನೊಂದಾಯಿಸಿಕೊAಡು ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಬೆಂಬಲವನ್ನು ನೀಡಬಹುದು.
‘ಹೌದು ನಾವು ಕ್ಷಯರೋಗವನ್ನು ಅಂತ್ಯಗೊಳಿಸಬಹುದು. ಭಾರತದ ನೇತೃತ್ವದಲ್ಲಿ ಜನರ ಭಾಗವಹಿಸುವಿಕೆಯೊಂದಿಗೆ’ ಎಂಬ ದ್ಯೇಯವನ್ನು ಸಾಕಾರಗೊಳಿಸಲು ಎಲ್ಲರೂ ಕ್ಷಯರೋಗದ ಬಗ್ಗೆ ಇರುವ ಭಯ, ತಪ್ಪು ತಿಳಿವಳಿಕೆಗಳು, ಗೊಂದಲ, ಕಳಂಕ, ತಾರಮ್ಯಗಳನ್ನು ಬಿಟ್ಟು ಹೋರಾಟವನ್ನು ನಡೆಸಿ ನಮ್ಮ ಜಿಲ್ಲೆಯನ್ನು ಕ್ಷಯಮುಕ್ತ ಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಮತ್ತು ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಎಂ.ಎಸ್ ರವಿಕುಮಾರ್ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 1096 ಕ್ಷಯ ರೋಗಿಗಳು ಪತ್ತೆ : ಎಲ್ಲರಿಗೂ ಉಚಿತ ಚಿಕಿತ್ಸೆ



