ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಇತರ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ. ಎಂ.ಸಿ.ಸುಧಾಕರ್ ಅವರು ಯೋಗ ಮಾಡುವ ಮೂಲಕ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ಸಂಸದ ಡಾ ಕೆ. ಸುಧಾಕರ್, ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ. ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ. ಎಲ್ ನಾಗೇಶ್,ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್ ಐ ಖಾಸಿಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ ಭಾಸ್ಕರ್,ಜಿಲ್ಲಾ ಆಯುಷ್ ಅಧಿಕಾರಿ ಡಾ.ತಬಿಬಾ ಬಾನು, ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಎಸ್ ಮಹೇಶ್ ಕುಮಾರ್ ಅವರು ವಿವಿಧ ಯೋಗಾಸನಗಳನ್ನು ಹಾಗೂ ಪ್ರಾಣಾಯಾಮ ಮಾಡುವ ಮೂಲಕ ಯೋಗ ದಿನಾಚರಣೆಗೆ ಸಾಥ್ ನೀಡಿದರು.
ಯೋಗ ಶಿಕ್ಷಕರಾದ ಲೋಕ್ ನಾಥ್, ಸುಧಾ ನಾಗರಾಜ್ ಅವರುಗಳು ಆಸನಗಳ ನಿರ್ದೇಶನಗಳನ್ನು ನೀಡಿದರು.ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಗಣ್ಯರು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಮಾಡಿದರು. ಯೋಗ ಶಿಕ್ಷಕರಾದ ಪೊಲೀಸ್ ನಾಗರಾಜ್, ವೀಣಾ ಲೋಕನಾಥ್, ಮಂಚನ ಬಲೆ ರವಿ,ಗೋವಿಂದ ಅವರು ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಮಾದರಿಯಾಗಿ ಆಸನಗಳನ್ನು ನಿರಾಯಸವಾಗಿ ವೇದಿಕೆಯಿಂದ ಮಾಡಿದರು. ಅವರನ್ನು ಇತರರು ಅನುಕರಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.