This is the title of the web page
This is the title of the web page

ತಿರುಪತಿ ತಿರುಮಲ ದೇಗುಲಕ್ಕೆ 11 ಟನ್ ತರಕಾರಿ ರವಾನೆ

ಚಿಂತಾಮಣಿ: ತಿರುಪತಿ ತಿರುಮಲದ ಶ್ರೀ ವೆಂಕಟರಮಣ ಸ್ವಾಮಿ ದೇಗುಲದ ಸನ್ನಿಧಿಯಲ್ಲಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ಕೆ ತಾಲೂಕಿನ ಶ್ರೀ ವೆಂಕಟರಮಣಸ್ವಾಮಿ ಭಕ್ತರು, ವ್ಯಾಪಾರಸ್ಥರು ಹಾಗೂ ದಾನಿಗಳು ನೀಡಿದ್ದ, ಟೊಮ್ಯಾಟೋ, ಹೂಕೋಸು, ಎಲೆಕೋಸು, ಆಲೂಗಡ್ಡೆ, ಕ್ಯಾರೆಟ್, ಬೀಟ್ರೋಟ್, ಕ್ಯಾಪ್ಸಿಕಂ, ಹುರುಳಿಕಾಯಿ, ಸೌತೆಕಾಯಿ, ಬದನೆಕಾಯಿ ಸೇರಿದಂತೆ ವಿವಿಧ ರೀತಿಯ ಸುಮಾರು 11 ಟನ್ನಿನಷ್ಟು ತರಕಾರಿಯನ್ನು ಟಿಟಿಡಿ ವಾಹನದಲ್ಲಿ ತಿರುಪತಿಗೆ ಕಳುಹಿಸಿಕೊಡಲಾಯಿತು.

ಶ್ರೀ ವೆಂಕಟರಮಣಸ್ವಾಮಿ ಭಕ್ತರ ಬಳಗದ ಸಂಚಾಲಕರಾದ ಅಗ್ರಹಾರ ಟಿ. ಶ್ರೀನಿವಾಸ್ ತರಕಾರಿ ಹೊತ್ತ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಭಕ್ತ ಜನರ ಸಹಕಾರ ಮತ್ತು ಉದಾರತೆಯಿಂದಾಗಿ ಹಲವು ವರ್ಷಗಳ ದೈವ ಕಾರ್ಯಕ್ಕೆ ತರಕಾರಿ ಕಳುಹಿಸುತ್ತಿದ್ದು, ಈ ದಿನ ಕಳುಹಿಸುತ್ತಿರುವುದು 129ನೇ ಲೋಡ್ ಆಗಿದೆ ಎಂದು ಹೇಳಿದರು.

ದಾನಿಗಳು ಸೇರಿದಂತೆ ನಾಡಿನ ಸಮಸ್ತ ಜನರಿಗೂ ಭಗವಂತನು ಒಳಿತು ಮಾಡಲೆಂದು ಪ್ರಾರ್ಥಿಸಿದರು. ಹಾಜರಿದ್ದ ಭಕ್ತ ಜನರಿಗೆ ದೇವರ ಪ್ರಸಾದವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೋಟೆಲ್ ಅಶೋಕ್, ಗಣೇಶ್ ಹೋಟೆಲಿನ ಮಾಲೀಕರಾದ ಶಿವಾಜಿ, ಶಾಂಭವಿ ತಂಡದ ಗೆಳೆಯರು ಹಾಗೂ ಇತರೆ ಭಕ್ತಾದಿಗಳು ಉಪಸ್ಥಿತರಿದ್ದರು.