ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಸುಮಾರು ೧೧ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕರೇನಹಳ್ಳಿಯ ನಿವಾಸಿ ನಿಖಿಲ್ ಕುಮಾರ್ ಮೃತ ಬಾಲಕ. ಮೃತ ಬಾಲಕನ ಅಕ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಗಂಗೋತ್ರಿ (೧೭) ಹಾಗೂ ನಿಖಿಲ್ ಕುಮಾರ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಖಿಲ್ ಮೃತಪಟ್ಟಿದ್ದಾನೆ. ಗಂಗೋತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯು ಗಂಭೀರವಾಗಿದೆ.
ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ಡಿಪೋ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದು ಸುಮಾರು ೧೦ ಮೀಟರ್ ದೂರ ಎಳೆದೊಯ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



