ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ 140 ಅಡಿ ಕೊಳವೆಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕನನ್ನು ರಕ್ಷಿಸಲು 16 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಪ್ರಯತ್ನದ ಹೊರತಾಗಿಯೂ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗುನಾ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ರಾಘೋಗಢ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಿಪ್ಲಿಯಾ ಗ್ರಾಮದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕ ಸುಮಿತ್ ಮೀನಾ ಎಂಬಾತ ಕೊಳವೆಬಾವಿಗೆ ಬಿದ್ದಿದ್ದ.
ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಆತನನ್ನು ಹೊರಗೆ ಕರೆತಂದಾಗ ಆತ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಕೂಡಲೇ ಆತನನ್ನು ಲೈಫ್ ಸಪೋರ್ಟ್ ಸಿಸ್ಟಂ ಮೂಲಕ ರಾಘೋಘಢದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸಿನ್ಹಾ ಪಿಟಿಐಗೆ ತಿಳಿಸಿದ್ದಾರೆ.
‘ಕ್ಷಮಿಸಿ, ಆತ ಇನ್ನಿಲ್ಲ’ ಎಂದು ಗುನಾ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ರಾಜ್ಕುಮಾರ್ ರಿಷೀಶ್ವರ್ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚಳಿಯ ವಾತಾವರಣದಲ್ಲಿ ಇಡೀ ರಾತ್ರಿ ಮಗು ಕಿರಿದಾದ ಬೋರ್ವೆಲ್ನಲ್ಲಿತ್ತು. ಹೀಗಾಗಿ, ಆತನ ಕೈ ಮತ್ತು ಕಾಲುಗಳು ತೇವಗೊಂಡು, ಊದಿಕೊಂಡಿದ್ದವು. ಆತನ ಬಟ್ಟೆಗಳು ಒದ್ದೆಯಾಗಿದ್ದು, ಬಾಯಿಯಲ್ಲಿ ಕೆಸರು ಕಂಡುಬಂದಿದೆ ಎಂದು ಅವರು ಹೇಳಿದರು.
ರಕ್ಷಣಾ ತಂಡ ರಾತ್ರಿಯಿಡೀ ಕೆಲಸ ಮಾಡಿದರು. ಪಿಟ್ ಮತ್ತು ಬೋರ್ವೆಲ್ ನಡುವಿನ ಮಾರ್ಗದ ಮೂಲಕ ಬಾಲಕನನ್ನು ತಲುಪಲು ಸಮಾನಾಂತರ ಹೊಂಡವನ್ನು ತೋಡಿದ್ದಾರೆ ಎಂದು ರಾಘೋಗಢ ಕಾಂಗ್ರೆಸ್ ಶಾಸಕ ಜೈವರ್ಧನ್ ಸಿಂಗ್ ಸ್ಥಳದಿಂದ ಫೋನ್ ಮೂಲಕ ಪಿಟಿಐಗೆ ತಿಳಿಸಿದರು.
ಸುಮಾರು 140 ಅಡಿ ಆಳದ ಬೋರ್ವೆಲ್ನಲ್ಲಿ ಬಾಲಕ 39 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನು. ಬೋರ್ವೆಲ್ನಲ್ಲಿ ನೀರು ಸಿಕ್ಕಿಲ್ಲದ ಕಾರಣ ಕೇಸಿಂಗ್ ಹಾಕಿರಲಿಲ್ಲ. ಶನಿವಾರ ಸಂಜೆ ಭೋಪಾಲ್ನಿಂದ ಎನ್ಡಿಆರ್ಎಫ್ ತಂಡ ಅಲ್ಲಿಗೆ ಆಗಮಿಸಿ ಕಾರ್ಯಾಚರಣೆಯಲ್ಲಿ ನೆರವಾಯಿತು ಎಂದು ಗುನಾ ಜಿಲ್ಲೆಯ ಜಿಲ್ಲಾಧಿಕಾರಿ ಸತೇಂದ್ರ ಸಿಂಗ್ ಶನಿವಾರ ತಿಳಿಸಿದ್ದಾರೆ.
ಶನಿವಾರ ಸಂಜೆ ಎಷ್ಟು ಹೊತ್ತಾದರೂ ಬಾಲಕ ಕಾಣದಿದ್ದಾಗ ಆತನ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಹುಡುಕಾಟ ನಡೆಸಿದಾಗ ಆತ ಬೋರ್ವೆಲ್ಗೆ ಬಿದ್ದಿರುವುದು ಗೊತ್ತಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.