ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಗೇರ್ ಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಮಾರ್ಗಗಳನ್ನು ಅಳವಡಿಸಲು 80 ಅಡಿ ರಸ್ತೆಯನ್ನು ಅಗೆದಿದ್ದು, ಇದರ ಪರಿಣಾಮ ವೈಟ್ಫೀಲ್ಡ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಭಾರೀ ಸಂಚಾರ ದಟ್ಟಣೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
15 ನಿಮಿಷಗಳಲ್ಲಿ ಸಂಚರಿಸಬಹುದಾದ ರಸ್ತೆಯಲ್ಲಿ ಇಂದು 1 ರಿಂದ 1.5 ಗಂಟೆಗಳ ಸಮಯವಾಗುತ್ತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
GEAR ಸ್ಕೂಲ್ ರಸ್ತೆಯಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿ ಕಳೆದ ಎಂಟು ತಿಂಗಳಿನಿಂದಲೂ ನಡೆಯುತ್ತಿದೆ. ರಸ್ತೆಯ ತುಂಬ ಧೂಳು ತುಂಬಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ರಸ್ತೆಯಲ್ಲಿ 5 ಶಾಲೆಗಳಿದ್ದು, ಫ್ಲಿಪ್ಕಾರ್ಟ್, ಇಂಟೆಲ್, ಇಎಕ್ಸ್ಎಲ್ನಂತಹ ಐಟಿ ಕಂಪನಿಗಳ ಕಚೇರಿಗಳಿವೆ. ಬಿಡಬ್ಲ್ಯುಎಸ್ಎಸ್ಬಿ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಮಕ್ಕಳು ಮತ್ತು ಕಚೇರಿಗೆ ಹೋಗುವವರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ.